ಡಿಸೆಂಬರ್ ನಂತರ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ಇರಲ್ಲ - ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
Saturday, September 16, 2023
ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ಸಮಸ್ಯೆ ಪರಿಹರಿಸಲಾಗುತ್ತಿದ್ದು, ಡಿಸೆಂಬರ್ ಬಳಿಕ ಯಾವುದೇ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ಇರಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಅವರು, ಬೆಂಗಳೂರಿನ ಇಂದು ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ನವೀಕರಿಸಿದ ತುರ್ತು ನಿಗಾ ಘಟಕ ಉದ್ಘಾಟಿಸಿ ಮಾತನಾಡುತ್ತಿದ್ದರು.
ರಾಜ್ಯ ಔಷಧಿ ಸರಬರಾಜು ಕಾರ್ಪೋರೇಷನ್ ಆಸ್ಪತ್ರೆಗಳಿಗೆ ಸರಿಯಾಗಿ ಔಷಧಿಗಳನ್ನ ಪೂರೈಕೆ ಮಾಡುತ್ತಿರಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇದನ್ನ ಸರಿಪಡಿಸುವ ನಿಟ್ಟಿನಲ್ಲಿ ಆದ್ಯತೆಯ ಮೇರೆಗೆ ಕೆಲಸ ಮಾಡುತ್ತಿದ್ದೇವೆ. ಡಿಸೆಂಬರ್ ಬಳಿಕ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಸಿಗುತ್ತಿಲ್ಲ ಎಂದು ಯಾರು ಹೇಳಬಾರದು. ಈ ನಿಟ್ಟಿನಲ್ಲಿ ತ್ವರಿತಗತಿಯಲ್ಲಿ ಔಷಧಿಗಳನ್ನ ಆಸ್ಪತ್ರೆಗಳಿಗೆ ಪೂರೈಸುವಂತೆ ತಾಕೀತು ಮಾಡಿದ್ದೇನೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಚಿಕಿತ್ಸೆಯ ಜೊತೆಗೆ ಸಮರ್ಪಕವಾಗಿ ಉಚಿತ ಔಷಧಿಗಳು ಸಿಗುವಂತಾಗಬೇಕು. ಸರಿಯಾಗಿ ಔಷಧಿಗಳು ಸಿಕ್ಕಾಗ ಮಾತ್ರ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಸಾರ್ವಜನಿಕರಲ್ಲಿ ನಂಬಿಕೆ ಮೂಡಿಸಲು ಸಾಧ್ಯ. ಹಾಗೆ ನೋಡಿದರೆ ಆಸ್ಪತ್ರೆಯ ಹೊರಗಡೆ ಜನ ಔಷಧಿ ಕೇಂದ್ರಗಳ ಅವಶ್ಯಕತೆಯೇ ಇಲ್ಲ. ಆಸ್ಪತ್ರೆಗಳಲ್ಲೇ ಔಷಧಿಗಳು ಸರಿಯಾಗಿ ದೊರೆತರೆ ಜನರು ಬೇರೆ ಕಡೆ ಔಷಧಿ ಪಡೆಯಲು ತಿರುಗಾಡುವ ಅಗತ್ಯತೆಯೇ ಬರೋದಿಲ್ಲ. ವೈದ್ಯರು ಹೊರಗಡೆ ಔಷಧಿ ತೆಗೆದುಕೊಳ್ಳುವಂತೆ ರೋಗಿಗಳಿಗೆ ಚೀಟಿ ಬರೆದುಕೊಡುವ ಪದ್ದತಿಯನ್ನ ಬದಲಿಸಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.
*ಜಯನಗರ ಸಾರ್ವಜನಿಕ ಆಸ್ಪತ್ರೆಗೆ 10 ಕೋಟಿ ವೆಚ್ಚದಲ್ಲಿ ಕಾಯಕಲ್ಪ*
ಜಯನಗರ ಸಾರ್ವಜನಿಕ ಆಸ್ಪತ್ರೆಗೆ ಅಗತ್ಯ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ 10 ಕೋಟಿ ವೆಚ್ಚದಲ್ಲಿ ಕಾರ್ಯಕ್ರಮಗಳನ್ನ ಕೈಗೆತ್ತಿಕೊಳ್ಳುವುದಾಗಿ ಇದೇ ವೇಳೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ಕೋವಿಡ್ ಸಂದರ್ಭದಲ್ಲಿ ಆಸ್ಪತ್ರೆ ಉತ್ತಮ ಕಾರ್ಯ ನಿರ್ವಹಿಸಿದೆ. ಆಸ್ಪತ್ರೆಯ ಆಡಳಿತ ವಿಚಾರಗಳಲ್ಲಿ ಇದ್ದ ಸಮಸ್ಯೆ ಪರಿಹರಿಸಲಾಗಿದೆ. ನಾನು ಖುದ್ದು ಆಸ್ಪತ್ರೆಗೆ ಭೇಟಿ ನೀಡಿ ಸಮಸ್ಯೆ ಪರಿಹರಿಸಿದ್ದೆ. ಇದೀಗ ಆಸ್ಪತ್ರೆಗೆ ಹೆಚ್ಚಿನ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ 10 ಕೋಟಿ ಕ್ರೀಯಾಯೋಜನೆ ರೂಪಿಸಲಾಗಿದ್ದು, ಅನುದಾನ ನೀಡಲು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
*4 ಕೋಟಿ ಸಿ.ಎಸ್.ಆರ್ ಫಂಡ್ ನಲ್ಲಿ ತುರ್ತು ನಿಗಾ ಘಟಕ*
ಕೆನರಾ ಬ್ಯಾಂಕ್ ಆಶ್ರಯದಲ್ಲಿ 4 ಕೋಟಿ ವೆಚ್ಚದಲ್ಲಿ ಆಸ್ಪತ್ರೆಯ ತುರ್ತು ನಿಗಾ ಘಟಕವನ್ನ ನವೀಕರಣಗೊಳಿಸಲಾಗಿದೆ. 20 ಹಾಸಿಗೆಯ ಘಟಕವನ್ನ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಸಚಿವರು, ಕೆನರಾ ಬ್ಯಾಂಕ್ ನ ಕಾರ್ಯಕ್ಕೆ ಧನ್ಯವಾದ ತಿಳಿಸಿದರು. ಆರೋಗ್ಯ ಕ್ಷೇತ್ರದಲ್ಲಿ ಈ ರೀತಿಯ ಕಾರ್ಯಗಳನ್ನ ನಡೆಸಲು ಹೆಚ್ಚು ದಾನಿಗಳು ಮುಂದಬರಬೇಕು. ಆರೋಗ್ಯ ಸೇವೆ ಜೀವಗಳನ್ನ ಉಳಿಸುವ ಮಹತ್ವದ ಕಾರ್ಯ. ಇಂಥಹ ಪುಣ್ಯದ ಕೆಲಸಕ್ಕೆ ಕೈಜೋಡಿಸಿದಾಗ ದಾನಿಗಳಿಗೆ ತೃಪ್ತಿ ನೀಡಲಿದೆ. ಆರೋಗ್ಯ ಕ್ಷೇತ್ರದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಖಾಸಗಿ ಕಂಪನಿಗಳು ಸಿ.ಎಸ್.ಆರ್ ಫಂಡ್ ನ ಅಡಿಯಲ್ಲಿ ಸಾಕಷ್ಟು ಸೇವಾ ಕಾರ್ಯಗಳನ್ನ ನಡೆಸಲು ಅವಕಾಶವಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.