ಅಶ್ಲೀಲ ಪದದಿಂದ ಪುತ್ರಿಯ ನಿಂದನೆ : ಥರ್ಮಾಪ್ಲಾಸ್ಕ್ ನಿಂದ ಥಳಿಸಿ ಸ್ನೇಹಿತನ ಹತ್ಯೆ
Thursday, September 21, 2023
ಬೆಂಗಳೂರು: ಮದ್ಯದ ನಶೆಯ ಮತ್ತಿನಲ್ಲಿ ತನ್ನ ಪುತ್ರಿಯನ್ನು ಅಶ್ಲೀಲ ಪದದಿಂದ ನಿಂದಿಸಿದ್ದಾನೆಂದು ಸೆಕ್ಯುರಿಟಿ ಗಾರ್ಡ್‌ನನ್ನು ಥರ್ಮಾ ಫ್ಲಾಸ್ಕ್ ನಿಂದ ಹೊಡೆದು ಸ್ನೇಹಿತನೇ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ದಿಣ್ಣೂರು ಸಿಗೇಹಳ್ಳಿ ನೇಪಾಳಿ ಕಾಲನಿ ನಿವಾಸಿ ಪ್ರೇಮ್ ರಾಜ್ ಉಪಾಧ್ಯಾಯ (57) ಮೃತಪಟ್ಟ ವ್ಯಕ್ತಿ. ಈತ ಸಿಗೇಹಳ್ಳಿ ಗೇಟ್ ಬಳಿಯ ಹೋಟೆಲ್ ಒಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ. ಧರ್ಮೇಂದ್ರ ಸಿಂಗ್ (40) ಕೊಲೆ ಮಾಡಿದ ಆರೋಪಿ. ಇದೀಗ ಪೊಲೀಸರು ಈತನನ್ನು ಬಂಧಿಸಿದ್ದಾರೆ.
ನೇಪಾಳ ಮೂಲದ ಪ್ರೇಮ್ ರಾಜ್ ಉಪಾಧ್ಯಾಯ ಹಾಗೂ ಧರ್ಮೇಂದ್ರ ಸಿಂಗ್, ಹೋಟೆಲೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಮದ್ಯ ಸೇವನೆ ಮಾಡಿಕೊಂಡು ಕೆಲಸಕ್ಕೆ ಬರುತ್ತಿದ್ದ ಆರೋಪದ ಮೇಲೆ ಎರಡು ತಿಂಗಳ ಹಿಂದೆ ಧರ್ಮೇಂದ್ರ ಸಿಂಗ್‌ನನ್ನು ಕೆಲಸದಿಂದ ಕಿತ್ತು ಹಾಕಲಾಗಿತ್ತು. ಬುಧವಾರ ಬೆಳಗ್ಗೆ 10.30ರ ವೇಳೆಗೆ ಪ್ರೇಮ್ ರಾಜ್, ಧರ್ಮೇಂದ್ರ ಸಿಂಗ್ ಸೇರಿದಂತೆ ನಾಲ್ವರು ಸ್ನೇಹಿತರು ಬಾರ್‌ಗೆ ಹೋಗಿ ಮದ್ಯ ಸೇವನೆ ಮಾಡಿದ್ದಾರೆ. ಆರೋಪಿಯ ಪತ್ನಿ ಕೆಲಸಕ್ಕೆ ಹೋಗಿದ್ದು, ಪುತ್ರಿ ಶಾಲೆಗೆ ಹೋಗಿದ್ದಳು. ಹಾಗಾಗಿ ಮನೆಯಲ್ಲಿ ಯಾರು ಇಲ್ಲವೆಂದು ಧರ್ಮೇಂದ್ರ ಸಿಂಗ್, ಸ್ನೇಹಿತರನ್ನು ಮನೆಗೆ ಕರೆದುಕೊಂಡು ಬಂದಿದ್ದ.
ಸ್ವಲ್ಪ ಹೊತ್ತಿಗೆ ಇಬ್ಬರು ಸ್ನೇಹಿತರು ಅಲ್ಲಿಂದ ಹೊರಟ್ಟು ಹೋಗಿದ್ದಾರೆ. ಪ್ರೇಮ್ ರಾಜ್ ಮತ್ತು ಧರ್ಮೇಂದ್ರ ಸಿಂಗ್, ಮತ್ತೆ ಬಾರ್‌ಗೆ ಹೋಗಿ ಮದ್ಯ ಸೇವನೆ ಮಾಡಿಕೊಂಡು ವಾಪಸ್ ಮನೆಗೆ ಬಂದಿದ್ದಾರೆ. ಮದ್ಯದ ಅಮಲಿನಲ್ಲಿ ಧರ್ಮೇಂದ್ರ ಸಿಂಗ್ ಪುತ್ರಿಯ ಕುರಿತು ಅಶ್ಲೀಲ ಪದದಿಂದ ಪ್ರೇಮ್ ರಾಜ್ ನಿಂದಿಸಿದ್ದಾನೆ. ಇದರಿಂದ ಕೋಪಗೊಂಡ ಧರ್ಮೇಂದ್ರ ಸಿಂಗ್, ಕೈಯಿಂದ ಪ್ರೇಮ್ ರಾಜ್ ಗೆ ಗುದ್ದಿ ತಲೆ ಮತ್ತು ಮುಖಕ್ಕೆ ಥರ್ಮಾ ಫ್ಲಾಸ್ಕ್ ನಿಂದ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ.
ಮೃತದೇಹದೊಂದಿಗೆ ಮನೆಯಲ್ಲಿ ಕುಳಿತಿದ್ದ ಆರೋಪಿ, ಅದನ್ನು ಬೇರೆಡೆಗೆ ಸಾಗಿಸಲು ತನ್ನ ಸ್ನೇಹಿತನಿಗೆ ಕರೆ ಮಾಡಿ 10 ಸಾವಿರ ರೂ. ಸಹಾಯ ಮಾಡುವಂತೆ ಧರ್ಮೇಂದ್ರ ಸಿಂಗ್ ಕೋರಿದ್ದಾನೆ. ಇದರಿಂದ ಗಾಬರಿಗೊಂಡ ಸ್ನೇಹಿತ, ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಎಚ್ಚೆತ್ತ ಪೊಲೀಸರು, ಸ್ಥಳಕ್ಕೆ ದೌಡಾಯಿಸಿ ಆರೋಪಿ ಧರ್ಮೇಂದ್ರ ಸಿಂಗ್ ಯನ್ನು ವಶಕ್ಕೆ ಪಡೆದು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ. ಕಾಡುಗುಡಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.