ಮಾಲಕನ ಪುತ್ರನನ್ನೇ ಅಪಹರಣಗೈದು ಹಣಕ್ಕೆ ಬೇಡಿಕೆ: ದುಡ್ಡು ಕೊಡದ್ದಕ್ಕೆ ಕಲ್ಲು ಎತ್ತಿಹಾಕಿ ಕೊಲೆ
Monday, September 25, 2023
ಲಖನೌ: ತಾವು ಕೇಳಿದ್ದಷ್ಟು ಹಣ ಕೊಡಲಿಲ್ಲವೆಂದು ಉದ್ಯಮಿಯೊಬ್ಬರ ಪುತ್ರನನ್ನು ದುಷ್ಕರ್ಮಿಗಳು ಅಪಹರಿಸಿ ದಾರುಣವಾಗಿ ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದು, ಇನ್ನುಳಿದಿರುವವರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ. ಬಾಲಕನ ಮೃತದೇಹ ಚಿತ್ರಕೂಟ ಅರಣ್ಯ ಪ್ರದೇಶದಲ್ಲಿ ದೊರಕಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟ್ರಾನ್ಸ್ಪೋರ್ಟ್ ಸಂಸ್ಥೆಯ ಮಾಲೀಕರಾಗಿರುವ ಪುಷ್ಪರಾಜ್ ಕೇಸರವಾಣಿ ಎಂಬುವರ ಬಳಿ ಕೆಲಸ ಮಾಡುತ್ತಿದ್ದವರೇ ಈ ಕೃತ್ಯ ಎಸಗಿದ್ದಾರೆ. ಇದೊಂದು ಪೂರ್ವ ನಿಯೋಜಿತ ಕೃತ್ಯವಾಗಿದ್ದು, ಆರೋಪಿಗಳು ಸಂತ್ರಸ್ತರ ಬಳಿ 15 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದು ಬಂದಿದೆ.
ಶನಿವಾರ ಸಂಜೆ 4ಗಂಟೆಯವರೆಗೂ ಬಾಲಕ ತನ್ನ ತಂದೆಯೊಂದಿಗೆ ಕಚೇರಿಯಲ್ಲಿದ್ದ. ಆ ಬಳಿಕ ನಾಪತ್ತೆಯಾಗಿದ್ದ. ಈ ಸಂಬಂಧ ಆತನ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಶನಿವಾರ ರಾತ್ರಿ 9ಗಂಟೆ ಸುಮಾರಿಗೆ ಪುಷ್ಪರಾಜ್ ಕೇಸರವಾಣಿ ಅವರಿಗೆ ಕರೆ ಮಾಡಿರುವ ಆರೋಪಿಗಳು ನಿಮ್ಮ ಪುತ್ರನನ್ನು ಅಪಹರಿಸಿದ್ದು, 15 ಲಕ್ಷ ಹಣ ಕೊಡುವಂತೆ ಹೇಳಿದ್ದಾರೆ. ಒಂದು ವೇಳೆ ತಾವು ಹೇಳಿದ ಕೆಲಸ ಮಾಡಲಿಲ್ಲವೆಂದರೆ ಪುತ್ರನನ್ನು ಕೊಲೆ ಮಾಡುವುದಾಗಿ ತಿಳಿಸಿದ್ದರು.
ಹೇಳಿದ ಸಮಯಕ್ಕೆ ಹಣ ತಲುಪಿದ ಕಾರಣ ಸಿಟ್ಟಿಗೆದ್ದ ಆರೋಪಿಗಳು ಬಾಲಕನ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ಧಾರೆ. ಬಳಿಕ ಮೃತದೇಹವನ್ನು ಚಿತ್ರಕೂಟ ಅರಣ್ಯ ಪ್ರದೇಶದಲ್ಲಿ ಎಸೆದು ಪರಾರಿಯಾಗಿದ್ದಾರೆ. ಆರೋಪಿಗಳು ಚಿತ್ರಕೂಟ ಅರಣ್ಯ ಪ್ರದೇಶದಲ್ಲಿ ಅಡಗಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ತೆರಳಿ ಪರಿಶೀಲನೆ ನಡೆಸಿದಾಗ ಪೊಲಿಸರು ಹಾಗು ಅಪಹರಣಕಾರರ ನಡುವೆ ಗುಂಡಿನ ಚಕಮಕಿಯಾಗಿದ್ದು ಇಬ್ಬರನ್ನೂ ವಶಕ್ಕೆ ಪಡೆಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.