ಅಪ್ರಾಪ್ತೆಯನ್ನು ಹತ್ಯೆಗೈದು ಶವಸಂಭೋಗ ಮಾಡಿದ ರೈಲ್ವೇ ಸಿಬ್ಬಂದಿ ಸೇರಿ ಮೂವರು ಅರೆಸ್ಟ್
Friday, September 29, 2023
ಕರೀಂಗಂಜ್: ಅಪ್ರಾಪ್ತೆಯನ್ನು ಉಸಿರುಗಟ್ಟಿಸಿ ಕೊಲೆಗೈದು, ಶವಸಂಭೋಗ ನಡೆಸಿರುವ ಆರೋಪದಲ್ಲಿ ರೈಲ್ವೆ ಸಿಬ್ಬಂದಿ ಸೇರಿದಂತೆ ಮೂವರನ್ನು ಅಸ್ಸಾಂನ ಕರೀಂಗಂಜ್ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.
ಈ ಅಮಾನವೀಯ, ಕ್ರೂರ ಘಟನೆ ಸೆಪ್ಟೆಂಬರ್ 9ರಂದು ನಡೆದಿತ್ತು. ಕರೀಂಗಂಜ್ ಪಟ್ಟಣದ ಬೈಪಾಸ್ ನಲ್ಲಿ ಹತ್ಯೆ ನಡೆದ ದಿನವೇ ಅಪ್ರಾಪ್ತೆಯ ಮೃತದೇಹ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಶವಸಂಭೋಗ (ನೆರ್ಕೊಫಿಲಿಯಾ) ನಡೆದಿರುವುದು ದೃಢಪಟ್ಟಿದೆ. ಆದ್ದರಿಂದ ಪೋಕ್ಸೊ ಕಾಯ್ದೆಯನ್ವಯ ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಕರೀಂಗಂಜ್ ಎಸ್ಪಿ ಪಾರ್ಥ ಪ್ರತೀಂ ದಾಸ್ ಹೇಳಿದ್ದಾರೆ.
ತನಿಖೆಯ ವೇಳೆ ಮೃತಪಟ್ಟ ಅಪ್ರಾಪ್ತೆಯ ಡೈರಿಯಲ್ಲಿ ಪತ್ತೆಯಾದ ಫೋನ್ ನಂಬರ್ ಆಧಾರದಲ್ಲಿ ತನಿಖೆ ಮುಂದುವರಿಸಿದ ಪೊಲೀಸರು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತನಿಖೆಯಲ್ಲಿ ಹೊಸದಾಗಿ ಉದ್ಯೋಗಕ್ಕೆ ಸೇರಿದ ರೈಲ್ವೆ ಸಿಬ್ಬಂದಿಯೊಬ್ಬ ಈ ಯುವತಿ ಜತೆ ಪ್ರೇಮಸಂಬಂಧ ಹೊಂದಿದ್ದ. ಆತ ಸದಾ ದೈಹಿಕ ಸಂಪರ್ಕಕ್ಕೆ ಒತ್ತಾಯಿಸುತ್ತಿದ್ದ. ಆದರೆ ಲೈಂಗಿಕತೆ ಸಂಪರ್ಕ ಬೆಳೆಸುವುದನ್ನು ಆಕೆ ನಿರಾಕರಿಸುತ್ತಾ ಬಂದಿದ್ದಳು ಎನ್ನುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ವಿವರಿಸಿದ್ದಾರೆ.
ಸೆಪ್ಟೆಂಬರ್ 9ರಂದು ಅಪ್ರಾಪ್ತೆ ಮನೆಯಲ್ಲಿ ಒಂಟಿಯಾಗಿದ್ದಳು. ಈ ವೇಳೆ ಆಕೆಯ ಪ್ರಿಯಕರ ತನ್ನ ಇಬ್ಬರು ಸ್ನೇಹಿತರೊಂದಿಗೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಇದಕ್ಕೆ ಪ್ರತಿರೋಧ ಒಡ್ಡಿರುವ ಅಪ್ರಾಪ್ತೆಯನ್ನು ಉಸಿರುಗಟ್ಟಿಸಿ ಸಾಯಿಸಿ ಒಬ್ಬರ ಮೇಲೆ ಒಬ್ಬರಂತೆ ಶವದೊಂದಿಗೆ ಅಮಾನವೀಯವಾಗಿ ಲೈಂಗಿಕ ಚಟುವಟಿಕೆ ನಡೆಸಿದ್ದಾರೆ ತನಿಖೆಯಲ್ಲಿ ಒಪ್ಪಿಕೊಂಡಿದ್ದಾರೆ. ಆರೋಪಿಗಳು ಮೃತದೇಹವನ್ನು ಹೆದ್ದಾರಿ ಬದಿ ಎಸೆದು ಹೋಗಿದ್ದರು. ಪತ್ತೆಯಾದ ಮೃತದೇಹವನ್ನು ಯುವತಿಯ ಪೋಷಕರು ಗುರುತಿಸಿದ್ದರು.