POCSO ಸಂತ್ರಸ್ತೆ ಮೇಲೆಯೆ ಲೈಂಗಿಕ ದೌರ್ಜನ್ಯ!
Monday, September 4, 2023
ಗದಗ: ಪೋಕ್ಸೋ ಸಂತ್ರಸ್ತೆಯಾಗಿ ನಗರದ ಬಾಲಕಿಯರ ಸರ್ಕಾರಿ ಬಾಲ ಮಂದಿರದಲ್ಲಿ ರಕ್ಷಣೆಯಲ್ಲಿದ್ದ 16 ವರ್ಷದ ಬಾಲಕಿಯೊಬ್ಬಳು ಗರ್ಭಿಣಿಯಾಗಿದ್ದು, ಈ ಸಂಬಂಧ ಗದಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಆ.26ರಂದು ಪ್ರಕರಣ ದಾಖಲು ಮಾಡಲಾಗಿದೆ.
“5 ವರ್ಷಗಳಿಂದ ಸರ್ಕಾರಿ ಬಾಲ ಮಂದಿರದಲ್ಲಿದ್ದ ಬಾಲಕಿಯನ್ನು ಆಕೆಯ ತಂದೆ ಆಗಾಗ ಮನೆಗೆ ಕರೆದುಕೊಂಡು ಹೋಗುತ್ತಿದ್ದರು. ಅದೇ ರೀತಿಯಾಗಿ, ಆ.17ರಂದು ಬಂದಿದ್ದ ತಂದೆ ಆಕೆಯನ್ನು ಮನೆಗೆ ಕರೆದುಕೊಂಡು ಹೋಗಿದ್ದರು. ಮರಳಿ ಬಂದ ಮೇಲೆ ಬಾಲಮಂದಿರದ ಅಧೀಕ್ಷಕಿ ಬಾಲಕಿಯನ್ನು ವಿಚಾರಿಸಿ, ಸಮಾಲೋಚನೆ ನಡೆಸಿದ ನಂತರ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ತಿಳಿದು ಬಂದಿದೆ' ಎಂದು ಜಿಲ್ಲಾ ಮಕ್ಕಳಾ ರಕ್ಷಣಾಧಿಕಾರಿ ರಾಧಾ ಮಣ್ಣೂರ ತಿಳಿಸಿದ್ದಾರೆ
“ಖಿನ್ನತೆಗೆ ಒಳಗಾಗಿದ್ದ ಅಕೆಗೆ ನಿಯಮಿತವಾಗಿ ಮನೋವೈದ್ಯರಿಂದ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಬಾಲಕಿಯನ್ನು ಆಕೆಯ ತಂದೆಯೊಂದಿಗೆ ಅಗಾಗ ಕಳಿಸಿಕೊಡಲಾಗುತ್ತಿತ್ತು. ನಾಲ್ಕು ತಿಂಗಳಲ್ಲಿ ನಾಲ್ಕು ಬಾರಿ ಮಗಳನ್ನು ತಂದೆ ತನ್ನ ಜತೆಗೆ ಕರೆದುಕೊಂಡು ಹೋಗಿದ್ದಾರೆ' ಎಂದು ತಿಳಿಸಿದರು.
“ತಂದೆಗೆ ಪರಿಚಯವಿರುವ ವ್ಯಕ್ತಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ಹಿಂದೆ ತಂದೆ ಜತೆಗೆ ಮನೆಗೆ ಹೋಗಿದ್ದ ಸಂದರ್ಭದಲ್ಲೂ ಆ ವ್ಯಕ್ತಿಯೇ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಸಂತ್ರಸ್ತ ಬಾಲಕಿ ತಿಳಿಸಿದ್ದಾಳೆ. ಅದರಂತೆ, ಹಾಸ್ಟೆಲ್‌ನ ಅಧೀಕ್ಷಕಿ ತಕ್ಷಣವೇ ಮೇಲಧಿಕಾರಿಗಳಿಗೆ ವಿಷಯ ತಿಳಿಸಿ, ಪ್ರಕರಣ ದಾಖಲಿಸಿದ್ದಾರೆ' ಎಂದು ಅವರು ತಿಳಿಸಿದರು. ಈ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
.