ಮಂಗಳೂರು: ದಂಪತಿ ಜಗಳ, ಪೊಲೀಸ್ ಮುಂಭಾಗವೇ ಮಗುವಿನ ಕತ್ತು ಹಿಸುಕಿ ಕೊಲೆಗೆತ್ನಿಸಿದ ತಂದೆ
Wednesday, September 27, 2023
ಮಂಗಳೂರು: ದಂಪತಿ ಗಲಾಟೆಯಲ್ಲಿ ಕೂಸು ಬಡವಾಯ್ತು ಎನ್ನುವಂತೆ ಮದ್ಯವ್ಯಸನಿ ತಂದೆಯೊಬ್ಬ ಠಾಣೆಯಲ್ಲಿ ಪೊಲೀಸ್ ಮುಂಭಾಗವೇ ತನ್ನ ಮಗುವನ್ನು ಗೋಡೆಗೆ ತಳ್ಳಿ ಕೊಲೆಗೆ ಯತ್ನಿಸಿದ ಘಟನೆ ಕದ್ರಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಕದ್ರಿ ವ್ಯಾಸನಗರ ನಿವಾಸಿ ಮಹೇಶ್ ಕೃತ್ಯವೆಸಗಿದ ಆರೋಪಿ. ವಿಪರೀತ ಮದ್ಯಸೇವನೆ ಚಟ ಹೊಂದಿದ್ದ ಈತ, ಪ್ರತಿನಿತ್ಯ ಪತ್ನಿ ಹಾಗೂ ಮಕ್ಕಳಿಗೆ ಕಿರುಕುಳ ನೀಡುತ್ತಿದ್ದ. ಸೆಪ್ಟೆಂಬರ್ 24ರಂದು ರಾತ್ರಿ ಕ್ಷುಲ್ಲಕ ಕಾರಣಕ್ಕೆ ಪತ್ನಿಯೊಂದಿಗೆ ಜಗಳ ತೆಗೆದಿದ್ದಾನೆ. ಈ ವೇಳೆ ಪತ್ನಿ ಮತ್ತು ಮಕ್ಕಳನ್ನು ಬೆಂಕಿ ಹಚ್ಚಿ ಕೊಲ್ಲುತ್ತೇನೆಂದು ಬೆದರಿಸಿ, ಹಲ್ಲೆಗೆ ಮುಂದಾಗಿದ್ದಾನೆ. ಈ ಸಂದರ್ಭ ಆತನ ಪತ್ನಿ ತಪ್ಪಿಸಿಕೊಂಡು ಕದ್ರಿ ಠಾಣೆಗೆ ಬಂದಿದ್ದಾರೆ. ಆದಷ್ಟು ಬೇಗ ನಮ್ಮ ಮನೆಗೆ ಬಂದು ಪತಿಯಿಂದ ಮಕ್ಕಳನ್ನು ರಕ್ಷಿಸಿ ಎಂದಿದ್ದಾರೆ.
ಕೊಂಚ ಹೊತ್ತಿನಲ್ಲಿ ಆರೋಪಿ ಮಹೇಶ ತನ್ನ 6 ವರ್ಷದ ಪುತ್ರ ಹಾಗೂ ಒಂದೂವರೆ ವರ್ಷದ ಪುತ್ರಿಯೊಂದಿಗೆ ಠಾಣೆಗೆ ಬಂದಿದ್ದಾನೆ. ಪೊಲೀಸರು ಆತನನ್ನು ವಿಚಾರಿಸಿದಾಗ ಪತ್ನಿಯೇ ತನಗೆ ಹೊಡೆದಿರುವುದಾಗಿ ಹೇಳಿದ್ದಾನೆ. ದೂರು ನೀಡಲು ಹೇಳಿದಾಗ ಆತ ಕಿರುಚಾಡಿ, ನಿಮ್ಮನ್ನು ಯಾರನ್ನೂ ಬಿಡುವುದಿಲ್ಲ ಎಂದು ತನ್ನ ಇಬ್ಬರು ಮಕ್ಕಳನ್ನು ಎಳೆದುಕೊಂಡು ಠಾಣೆಯಿಂದ ಹೊರಗೆ ಬಂದಿದ್ದ.
ಠಾಣೆಯೊಳಗಿದ್ದ ಆತನ ಪತ್ನಿ ಹೊರ ಹತ್ತಿರ ಬಂದಲ್ಲಿ ತನ್ನ ಕೈಯಲ್ಲಿದ್ದ ಪುತ್ರಿಯನ್ನು ಗೋಡೆಗೆ ಚಚ್ಚಿ ಕೊಲ್ಲುತ್ತೇನೆಂದು ಬೆದರಿಸಿದ್ದಾನೆ. ಪೊಲೀಸರು ಮಗುವನ್ನು ಬಿಟ್ಟು ಬಿಡುವಂತೆ ಹೇಳಿದಾಗ, ಮಗುವಿನ ಕುತ್ತಿಗೆಯನ್ನು ಹಿಡಿದು ಎಳೆದಾಡಿ ಮಗುವನ್ನು ಎತ್ತಿ ನೆಲಕ್ಕೆ ಎಸೆಯಲು ಪ್ರಯತ್ನಿಸಿದ್ದಾನೆ.
ಮಗುವಿನ ಕುತ್ತಿಗೆ ಹಾಗೂ ತಲೆಗೆ ಗುದ್ದಿದ ಗಾಯವಾಗಿ ಮಗು ಜೋರಾಗಿ ಕೂಗಲಾರಂಭಿಸಿದೆ. ಈ ವೇಳೆ, ರಾತ್ರಿ ಕರ್ತವ್ಯದಲ್ಲಿದ್ದ ಪಿಎಸ್‌ಐ ಪ್ರತಿಭಾ ತಕ್ಷಣ ಮಗುವನ್ನು ಎತ್ತಿ ಆರೋಪಿಯನ್ನು ಹಿಡಿದು ಕೂಡಿ ಹಾಕುವಂತೆ ಸಿಬ್ಬಂದಿಗೆ ಸೂಚಿಸಿದ್ದಾರೆ. ಅಲ್ಲದೆ, ಮಗುವಿನ ತಾಯಿ ಹಾಗೂ ಬಾಲಕನನ್ನು ಕರೆದುಕೊಂಡು ಇಲಾಖಾ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಹೆಡ್ ಕಾನ್‌ಸ್ಟೇಬಲ್ ಶರತ್ ಕುಮಾರ್ ಅವರು ಆರೋಪಿ ಮಹೇಶ್ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದಾನೆ ಎಂದು ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.