ಮಂಗಳೂರು: ಡಾ.ಶಂಸುಲ್ ಇಸ್ಲಾಂ ಉಪನ್ಯಾಸಕ್ಕೆ ಎಬಿವಿಪಿಯಿಂದ ವಿರೋಧ - ಮಂಗಳೂರು ವಿವಿ ಆವರಣದಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ
Saturday, September 9, 2023
ಮಂಗಳೂರು: ಬಿ.ವಿ ಕಕ್ಕಿಲ್ಲಾಯ ಪ್ರತಿಷ್ಠಾನದ ವತಿಯಿಂದ ನಗರದ ಹಂಪನಕಟ್ಟೆಯ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ದೆಹಲಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ಶಂಸುಲ್ ಇಸ್ಲಾಂ ಅವರ ಉಪನ್ಯಾಸ ಆಯೋಜಿಸಲಾಗಿತ್ತು. ಡಾ.ಶಂಸುಲ್ ಇಸ್ಲಾಂ ಮೊದಲ ಸ್ವಾತಂತ್ರ್ಯ ಸಂಗ್ರಾಮ 1857 - ಜಂಟಿ ಬಲದಾನಗಳು , ಜಂಟಿ ವಾರಿಸುದಾರಿಕೆ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ವಿರೋಧಿಸಿ ಎಬಿವಿಪಿ ಪ್ರತಿಭಟನೆ ನಡೆಸಿದೆ.
ಪ್ರತಿಭಟನೆ ವೇಳೆ ಕಾಲೇಜು ವಿದ್ಯಾರ್ಥಿಗಳ ಹೊರತಾಗಿ ಭಾಗಿಯಾದ 10 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಡಾ.ಶಂಸುಲ್ ಇಸ್ಲಾಂ ಉಪನ್ಯಾಸ ನಡೆಯುತ್ತಿದ್ದ ವೇಳೆ ಕಾಲೇಜು ಸುತ್ತಲೂ ಪೊಲೀಸ್ ಬಿಗಿ ಬಂದೊಬಸ್ತು ಏರ್ಪಡಿಸಲಾಗಿತ್ತು.
ಡಾ ಶಂಸುಲ್ ಇಸ್ಲಾಂಗೆ ಎಬಿವಿಪಿ ಭಾರೀ ವಿರೋಧ ವ್ಯಕ್ತಪಡಿಸಿದೆ. ವಿರೋಧದ ನಡುವೆಯೂ ಬಿ ವಿ ಕಕ್ಕಿಲ್ಲಾಯ ಪ್ರತಿಷ್ಠಾನದಿಂದ ಕಾರ್ಯಕ್ರಮ ನಡೆದಿದೆ. ಹೊರಗಡೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರೂ ಪೊಲೀಸ್ ಬಿಗಿ ಬಂದೋಬಸ್ತ್ ನಲ್ಲಿ ಉಪನ್ಯಾಸ ಕಾರ್ಯಕ್ರಮ ನಡೆದಿತ್ತು. ಪ್ರತಿಭಟನೆ ವೇಳೆ ವಿದ್ಯಾರ್ಥಿಗಳಿಂದ ಗೋ ಬ್ಯಾಕ್ ಶಂಸುಲ್ ಘೋಷಣೆ ಕೇಳಿ ಬಂದಿತ್ತು.
ಆರ್ ಎಸ್ ಎಸ್ ನ ತೀವ್ರ ವಿರೋಧಿ ಆಗಿರುವ ಡಾ ಶಂಸುಲ್ ಇಸ್ಲಾಂ ಕಾಲೇಜು ಆವರಣದಲ್ಲಿ ಭಾಷಣ ಮಾಡಿರುವುದರಿಂದ ಎಬಿವಿಪಿ ಉಗ್ರ ಪ್ರತಿಭಟನೆಗೆ ಮುಂದಾಗಿದೆ. ಆದರೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾಲೇಜು ಆವರಣದಲ್ಲಿ ಭಾರೀ ಪೊಲೀಸ್ ಬಂದೋಬಸ್ತು ವ್ಯವಸ್ಥೆ ಮಾಡಲಾಗಿತ್ತು. ಕೊನೆಗೆ ಡಾ.ಶಂಸುಲ್ ಇಸ್ಲಾಂ ಅವರು ಉಪನ್ಯಾಸ ನೆರವೇರಿಸಿ ಯಾವುದೇ ತೊಂದರೆಯಿಲ್ಲದೆ ಕಾಲೇಜಿನಿಂದ ಹೊರಟಿದ್ದಾರೆ.