ಉಳ್ಳಾಲ ಪೊಲೀಸ್ ಸಿಬ್ಬಂದಿಗೆ ಕ್ವಾಟ್ರಸ್ ನಲ್ಲಿರುವ ಬೀದಿನಾಯಿಗಳ ಕಾಟ : ಮೂವರಿಗೆ ದಾಳಿ
Sunday, September 3, 2023
ಉಳ್ಳಾಲ: ಇಲ್ಲಿನ ಉಳ್ಳಾಲ ಠಾಣೆಯ ಹಿಂಭಾಗದಲ್ಲಿರುವ ಪೊಲೀಸ್ ಕ್ವಾಟ್ರಸ್ ಆವರದಲ್ಲಿ ಬೀದಿ ನಾಯಿಗಳ ಕಾಟ ತಡೆಯಲಸಾಧ್ಯವಾಗಿದ್ದು, ಕಳೆದ ವಾರ ಇಬ್ಬರು ಪೊಲೀಸ್ ಕಾನ್ಸ್ ಟೇಬಲ್ ಮತ್ತು ಲೇಡಿ ಪೊಲೀಸ್ ಕಾನ್ಸ್ ಟೇಬಲ್ ಓರ್ವರ ಪತಿಗೆ ಹುಚ್ಚು ನಾಯಿ ಕಡಿದಿದೆ ಎಂಬುದು ತಡವಾಗಿ ತಿಳಿದು ಬಂದಿದೆ.
ಉಳ್ಳಾಲ ಪೊಲೀಸ್ ಠಾಣಾ ಪಿಸಿಗಳಾದ ಸತೀಶ್, ನವೀನ್ ಹಾಗೂ ಲೇಡಿ ಪಿಸಿ ಭಾಗ್ಯಶ್ರೀಯವರ ಪತಿ ರಂಗನಾಥ್ ಎಂಬವರಿಗೆ ಹುಚ್ಚು ನಾಯಿ ಕಡಿದಿದೆ. ಪೊಲೀಸ್ ವಸತಿ ಗೃಹದ ಆವರಣದಲ್ಲಿ ಬೀದಿ ನಾಯಿಗಳು ಬಿಡಾರ ಹೂಡಿದೆ. ಈ ನಾಯಿಗಳಲ್ಲೊಂದು ನಾಯಿ ಮೂವರನ್ನು ಕಚ್ಚಿ ಗಾಯಗೊಳಿಸಿದೆ. ಇದೀಗ ಹಲವಾರು ನಾಯಿಗಳು ರೇಬಿಸ್ ರೋಗಕ್ಕೆ ತುತ್ತಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಇದೀಗ ಹುಚ್ಚುನಾಯಿಯ ಬಗ್ಗೆ ಭೀತಿಗೊಳಗಾಗಿರು ಪೊಲೀಸರು ಮಂಗಳೂರಿನ ಅನಿಮಲ್ ಕೇರ್ ಟ್ರಸ್ಟ್ ಗೆ ಕರೆ ಮಾಡಿ ದಾಳಿ ನಡೆಸಿರು ನಾಯಿಯನ್ನು ಕೊಂಡೊಯ್ಯುವಂತೆ ಮನವಿ ಮಾಡಿದ್ದಾರೆ. ಅನಿಮಲ್ ಕೇರ್ ನವರು ಕಚ್ಚಿದ ನಾಯಿಯ ವಿಡಿಯೋ ತೆಗೆದು ವಾಟ್ಸ್ ಅಪ್ ನಲ್ಲಿ ಕಳಿಸಲು ತಿಳಿಸಿದ್ದು ಪೊಲೀಸರು ನಾಯಿಯ ವಿಡಿಯೋವನ್ನು ಕಳುಹಿಸಿದ್ದಾರೆ.
ಹುಚ್ಚು ನಾಯಿ ಕಡಿತಕ್ಕೊಳಗಾದ ಪೊಲೀಸ್ ಸಿಬ್ಬಂದಿ ಆಂಟಿ ರೇಬಿಸ್ ಲಸಿಕೆ ಪಡೆದು ಚಿಕಿತ್ಸೆ ಪಡೆದಿದ್ದಾರೆ. ವಸತಿಗೃಹದಲ್ಲಿರುವ ಇತರ ನಾಯಿಗಳಿಗೂ ರೇಬಿಸ್ ಹರಡಿರುವ ಬಗ್ಗೆ ಬಲವಾದ ಶಂಕೆ ಉಂಟಾಗಿದೆ.