"ಚಾರುವಸಂತ" ರಂಗ ತಾಲೀಮು: ಡಾ. ಎಂ. ಮೋಹನ ಆಳ್ವ ಚಾಲನೆ
"ಚಾರುವಸಂತ" ರಂಗ ತಾಲೀಮು: ಡಾ. ಎಂ. ಮೋಹನ ಆಳ್ವ ಚಾಲನೆ
ಹಲವು ಅತ್ಯುತ್ತಮ ಕೃತಿಗಳನ್ನು ಕನ್ನಡ ನಾಡಿಗೆ ನೀಡಿದ ನಾಡೋಜ ಹಂ.ಪ. ನಾಗರಾಜಯ್ಯ ಅವರು ನಮ್ಮ ನಡುವಿನ ಒಬ್ಬ ಶ್ರೇಷ್ಠ ಸಾಹಿತಿ. 14 ಭಾಷೆಗಳಿಗೆ ಅನುವಾದ ಆಗಿರುವ ಅವರ ಪ್ರಸಿದ್ಧ ಕೃತಿಯಾಗಿರುವ ಚಾರುವಸಂತ ದೇಸಿ ಕಾವ್ಯವನ್ನು ರಂಗಕ್ಕೆ ತರಲು ನಮ್ಮ ಸಂಸ್ಥೆಗೆ ಬಹಳ ಹೆಮ್ಮೆ ಅನಿಸಿದೆ ಎಂದು ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರು ಹೇಳಿದರು.
ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಆಶ್ರಯದಲ್ಲಿ ನಡೆಸಲಿರುವ ಚಾರುವಸಂತ ನಾಟಕ ತಾಲೀಮನ್ನು ಬೆಂಗಳೂರಿನ ವುಡ್‌ಲ್ಯಾಂಡ್ಸ್‌ನಲ್ಲಿ ನಾಟಕದ ಪೋಸ್ಟರ್ ಬಿಡುಗಡೆಗೊಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಹಿರಿಯ ಪತ್ರಕರ್ತ ಲಕ್ಷ್ಮಣ ಕೊಡಸೆ ಸಮಾರಂಭದ ಮುಖ್ಯ ಅತಿಥಿಗಳಾಗಿದ್ದರು. ನನ್ನ ಗುರುಗಳ ಕೃತಿಯೊಂದು ರಂಗ ಕೃತಿಯಾಗುತ್ತಿರುವುದಕ್ಕೆ ಬಹಳ ಸಂತಸವಾಗುತ್ತಿದೆ. ಹಲವು ಮಹತ್ವದ ಪ್ರಯೋಗಗಳನ್ನು ರಂಗಕ್ಕೆ ತಂದಿರುವ ಜೀವನರಾಮ್ ಸುಳ್ಯ ನಿರ್ದೇಶನದಲ್ಲಿ ಈ ಚಾರುವಸಂತವು ಕನ್ನಡ ರಂಗಭೂಮಿಯಲ್ಲಿ ಹೊಸ ಸಂಚಲನ ಮೂಡಿಸಲಿ ಎಂದು ಶುಭ ಹಾರೈಸಿದರು.
ಕೃತಿಕಾರ ನಾಡೋಜ ಹಂ.ಪ.ನಾಗರಾಜಯ್ಯ ಅವರ ಚಾರುವಸಂತದ ರಂಗರೂಪವನ್ನು ಸಿದ್ಧಪಡಿಸಿದ ಸಾಹಿತಿ ರಂಗಕರ್ಮಿ ಡಾ. ನಾ. ದಾಮೋದರ ಶೆಟ್ಟಿ ಅವರು ಶ್ರಮವನ್ನು ಶ್ಲಾಘಿಸಿದರು. ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಕಲಾವಿದರ ಜೊತೆಗೆ ನೀನಾಸಂ ರಂಗಾಯಣಗಳಲ್ಲಿ ಅನುಭವ ಪಡೆದ ಕೆಲವು ಕಲಾವಿದರೂ ಪಾತ್ರ ವಹಿಸಲಿದ್ದು, ಅಕ್ಟೋಬರ್ ಕೊನೆಯ ವಾರದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ನಾಟಕದ ನಿರ್ದೇಶಕರೂ ಆದ ರಂಗಕರ್ಮಿ ಜೀವನ ರಾಮ್ ಸುಳ್ಯ ತಿಳಿಸಿದರು.