ಒಂದು ತಿಂಗಳ ಬಾಣಂತಿ ಮೇಲೆ ಅತ್ಯಾಚಾರ, ಉಸಿರುಗಟ್ಟಿಸಿ ಕೊಲೆ
Wednesday, September 20, 2023
ಗುವಾಹಟಿ: ಒಂದು ತಿಂಗಳ ಬಾಣಂತಿ ಮೇಲೆ ಸಾಮೂಹಿಕ ಅತ್ಯಾಚಾರಗೈದು ಉಸಿರುಗಟ್ಟಿಸಿ ಕೊಂದು ಹಾಕಿರುವ ಘಟನೆ ಸೋಮವಾರ ರಾತ್ರಿ ಅಸ್ಸಾಂನಲ್ಲಿ ಸಂಭವಿಸಿದೆ.
ಈ ಹೇಯ ಕೃತ್ಯ ಅಸ್ಸಾಂನ ಮೋರಿಗಾಂವ್ ಜಿಲ್ಲೆ ಪಸಾಟಿಯಾ ಪ್ರದೇಶದಲ್ಲಿ ನಡೆದಿದೆ. ಹತ್ಯೆಯಾದ ನಿಕಿತಾ ದೇವಿ (25)ಯ ಪತಿ ಸಮೀಪದ ಚಿತ್ರಮಂದಿರದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದು, ಕರ್ತವ್ಯನಿಮಿತ್ತ ಮನೆಯಿಂದ ಹೊರಗೆ ಹೋಗಿದ್ದರು.
ನಿಕಿತಾ ದೇವಿ ತನ್ನ ನವಜಾತ ಶಿಶುವಿನೊಂದಿಗೆ ಮನೆಯಲ್ಲಿದ್ದರು. ಈ ವೇಳೆ ಬಾಗಿಲು ಮುರಿದು ಒಳನುಗ್ಗಿದ ಅಪರಿಚಿತ ದುಷ್ಕರ್ಮಿಗಳು ಆಕೆಯ ಮೇಲೆ ಅತ್ಯಾಚಾರವೆಸಗಿ ಉಸಿರುಗಟ್ಟಿಸಿ ಕೊಂದುಹಾಕಿದ್ದಾರೆ ಎಂದು ವರದಿ ತಿಳಿಸಿವೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿರುವ ಪೋಲಿಸರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ಅಲ್ಲದೆ ಕೃತ್ಯ ಎಸಗಿರುವ ದುಷ್ಕರ್ಮಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.