ಕುಟುಂಬ ಸದಸ್ಯರ ಎದುರೇ ಮೂವರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ನಗ - ನಗದು ದರೋಡೆ
ಚಂಡೀಗಢ: ನಾಲ್ವರು ಅಪರಿಚಿತ ದರೋಡೆಕೋರರು ಮನೆಯೊಂದಕ್ಕೆ ನುಗ್ಗಿ ಕುಟುಂಬ ಸದಸ್ಯರ ಎದುರೇ ಮೂವರು ಮಹಿಳೆಯರ ಮೇಲೆ ಅತ್ಯಾಚಾರವೆಸಗಿ ನಗ - ನಗದು ದೋಚಿದ ಘೋರ ದುರಂತ ಹರಿಯಾಣದ ಪಾಣಿಪತ್‌ನಲ್ಲಿ ನಡೆದಿದೆ ಎಂದು ಪೋಲಿಸರು ತಿಳಿಸಿದ್ದಾರೆ.
ಈ ದುರ್ಘಟನೆ ಬುಧವಾರ ತಡರಾತ್ರಿ ನಡೆದಿದ್ದು, ಆರೋಪಿಗಳು ಚಾಕು ಮತ್ತು ಇನ್ನಿತರ ಹರಿತವಾದ ಆಯುಧಗಳು ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ನಾಲ್ವರು ಮುಸುಕುಧಾರಿಗಳ ತಂಡವೊಂದು ಏಕಾಏಕಿ ಮನೆಯೊಳಗೆ ನುಗ್ಗಿ ಮನೆಯೊಳಗಿದ್ದ ಸದಸ್ಯರನ್ನು ಒಂದು ಕೊಣೆಯಲ್ಲಿ ಕೂಡಿ ಹಾಕಿದೆ. ಬಳಿಕ ಮನೆಯಲ್ಲಿದ್ದ ಮೂವರು ಮಹಿಳೆಯರನ್ನು ಚಾಕು ತೋರಿಸಿ ಬೆದರಿಸಿ ಅತ್ಯಾಚಾರವೆಸಗಿದ್ದಾರೆ. ಆ ಬಳಿಕ ಮನೆಯೊಳಗಿದ್ದ ನಗ ನಗದು ದೋಚಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಅಪರಿಚಿತರು ಮುಸುಕುಧಾರಿಗಳಾಗಿದ್ದರಿಂದ ಅವರ ಗುರುತು ಹಿಡಿಯಲು ಸಾಧ್ಯವಾಗಲಿಲ್ಲ ಎಂದು ಕುಟುಂಬ ಸದಸ್ಯರು ಹೇಳಿಕೊಂಡಿದ್ದಾರೆ.
ಇನ್ನೊಂದೆಡೆ ಈ ಸಾಮೂಹಿಕ ಅತ್ಯಾಚಾರ, ದರೋಡೆ ನಡೆದ ಸ್ಥಳದಿಂದ ಸುಮಾರು ಒಂದು ಕಿಮೀ ದೂರದಲ್ಲಿ ಅದೇ ದಿನ ರಾತ್ರಿ ನಡೆದ ಪ್ರತ್ಯೇಕ ಘಟನೆಯಲ್ಲಿ, ಮಹಿಳೆಯ ಮೇಲೆ ದಾಳಿ ನಡೆದಿದೆ. ಬಳಿಕ ಆಕೆಯ ಮನೆಯಲ್ಲಿದ್ದ ಚಿನ್ನ ಹಾಗೂ ನಗದು ದರೋಡೆ ಮಾಡಲಾಗಿದೆ. ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೂಲಗಳ ಪ್ರಕಾರ ಎರಡು ಪ್ರಕರಣಗಳಲ್ಲೂ ಒಂದೇ ಗುಂಪಿನ ಕೈವಾಡ ಇರುವ ಸಾಧ್ಯತೆ ಇರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.