ರಹಸ್ಯವಾಗಿ ಮದುವೆಯಾಗಿದ್ದಾರಾ ನಟಿ ಸಾಯಿ ಪಲ್ಲವಿ? ವೈರಲ್ ಫೋಟೋ ಹಿಂದಿನ ಅಸಲಿಯತ್ತೇನು?
Thursday, September 21, 2023
ಚೆನ್ನೈ: ಸಾಯಿ ಪಲ್ಲವಿ… ಈ ಹೆಸರು ಕೇಳಿದರೆ ಸಾಕು ಸರಳವಾಗಿರುವ ಹುಡುಗಿಯರನ್ನು ಇಷ್ಟಪಡುವ ಹುಡುಗರ ಹಾರ್ಟ್ ಬೀಟ್ ಹೆಚ್ಚಾಗುತ್ತದೆ. ಸೌತ್ ಇಂಡಿಯಾ ಸಿನಿಮಾಗಳಲ್ಲಿ ನಟಿ ಸಾಯಿ ಪಲ್ಲವಿ ಹೆಸರು ತೆಗೆದರೆ ಸಾಕು, ಕೇವಲ ಅವರ ಸೂಪರ್ ಹಿಟ್ ಸಿನಿಮಾಗಳ ಲಿಸ್ಟೇ ಕಣ್ಣೆದುರು ಬರುತ್ತದೆ. ಅಲ್ಲದೆ ಡಿ-ಗ್ಲಾಮರಸ್ ರೋಲ್, ಸರಳತೆ, ನೋ-ಮೇಕಪ್ ಲುಕ್, ಉತ್ತಮ ಸಿನಿಮಾಗಳ ಆಯ್ಕೆಗೆ ನಟಿ ಸಾಯಿ ಪಲ್ಲವಿ ಹೆಸರುವಾಸಿ. ಜನರ ನಂಬಿಕೆಗೆ ದ್ರೋಹ ಮಾಡುವ ಜಾಹೀರಾತುಗಳನ್ನು ನಿರಾಕರಿಸಿ ಜನರ ಮೆಚ್ಚಿಗೆಗೂ ಪಾತ್ರರಾಗಿದ್ದಾರೆ. ಅದರೊಂದಿಗೆ ಇವರು ಕೆಲವು ದೊಡ್ಡ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸಲು ನಿರಾಕರಿಸಿ ವಿವಾದಗಳಿಗೂ ತುತ್ತಾಗಿದ್ದೂ ಇದೆ. ಸಿನಿಮಾ ರಂಗದಲ್ಲಿ ಒಳ್ಳೆಯ ಹೆಸರು ಮಾಡಿರುವ ಸಾಯಿ ಪಲ್ಲವಿ ಕುರಿತು ಒಂದು ಸುದ್ದಿ ನಿನ್ನೆಯಿಂದಲೂ ಭಾರೀ ಚರ್ಚೆಯಾಗುತ್ತಿದೆ.
ಅದೇನೆಂದರೆ, ತಮಿಳು ಸಿನಿಮಾ ನಿರ್ದೇಶಕ ರಾಜ್ಕುಮಾರ್ ಪೆರಿಯಸ್ವಾಮಿಯೊಂದಿಗೆ ಸಾಯಿ ಪಲ್ಲವಿ ಮದುವೆ ಆಗಿದ್ದಾರೆ ಎಂಬುದು. ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ವೈರಲ್ ಆಗಿರುವ ಫೋಟೋದಲ್ಲಿ ರಾಜ್ಕುಮಾರ್ ಹಾಗೂ ಸಾಯಿಪಲ್ಲವಿ ಹೂವಿನ ಹಾರ ಹಾಕಿಕೊಂಡು, ಹಣೆಗೆ ಕುಂಕುಮ ಇಟ್ಟುಕೊಂಡು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಈ ಫೋಟೋಗಳು ಸಾಯಿಪಲ್ಲವಿ ಅವರ ಫ್ಯಾನ್ಸ್ ಗ್ರೂಪ್ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಸಾಯಿ ಪಲ್ಲವಿ ರಹಸ್ಯವಾಗಿ ಮದುವೆ ಮಾಡಿಕೊಂಡಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ, ಅಸಲಿಯತ್ತು ಬೇರೆಯೇ ಇದೆ. ಇದು ಸುಳ್ಳು ಸುದ್ದಿ.
ಈ ಫೋಟೋಗಳು ಸಾಯಿ ಪಲ್ಲವಿ ಅವರ ಮದುವೆ ಫೋಟೋಗಳಲ್ಲ. ಬದಲಾಗಿ ಇದು ತಮಿಳು ಸಿನಿಮಾನಟ ಶಿವ ಕಾರ್ತಿಕೆಯನ್ ರವರ 21ನೇ ಸಿನಿಮಾದ ಪೂಜಾ ಮುಹೂರ್ತದ ಫೋಟೋಗಳಾಗಿವೆ. ಸಾಯಿಪಲ್ಲವಿ ಅವರ ಹುಟ್ಟುಹಬ್ಬದ ದಿನದಂದು ರಾಜ್ಕುಮಾರ್ ಅವರೇ ಈ ಫೋಟೋಗಳನ್ನು ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಫೋಟೋವನ್ನು ಜೂಮ್ ಮಾಡಿ ನೋಡಿದರೆ ರಾಜ್ಕುಮಾರ್ ಅವರು ಕ್ಲ್ಯಾಪ್ಬೋರ್ಡ್ ಹಿಡಿದಿರುವುದು ಕಾಣುತ್ತದೆ. ಆದರೆ, ಮದುವೆ ಫೋಟೋ ಎಂಬಂತೆ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಇದೇ ಸಂದರ್ಭದಲ್ಲಿ ಸಾಯಿ ಪಲ್ಲವಿ ಅಭಿಮಾನಿಗಳ ಪುಟದಲ್ಲಿ ಈ ನಕಲಿ ಪೋಸ್ಟ್ ವೈರಲ್ ಆಗುತ್ತಿದೆ. ನಟಿಯನ್ನು ಅಭಿನಂದಿಸಿ ಹಲವರು ಕಮೆಂಟ್ ಮಾಡಿದ್ದಾರೆ. ಆದರೆ, ಮದುವೆ ಸುದ್ದಿ ಸುಳ್ಳು ಎಂಬುದೇ ಅಸಲಿ ವಿಚಾರವಾಗಿದೆ.