ದುಬೈನಲ್ಲಿದ್ದ ಮಗನ ಸರ್ಪ್ರೈಸ್ ವಿಸಿಟ್: ಮೀನು ಮಾರುಕಟ್ಟೆಯಲ್ಲಿ ಮುಖ ಮುಚ್ಕೊಂಡು ಬಂದ ಮಗನ ಪತ್ತೆ ಹಚ್ಚಿದ ತಾಯಿ
Friday, September 22, 2023
ಉಡುಪಿ: ವಿದೇಶದಲ್ಲಿ ಉದ್ಯೋಗದಲ್ಲಿದ್ದ ಯುವಕನೊಬ್ಬ ಬರೋಬ್ಬರಿ ಮೂರು ವರ್ಷಗಳ ಬಳಿಕ ತಾಯ್ನಾಡಿಗೆ ಮರಳಿದ್ದಾನೆ. ಆತ ತಾನು ಮನೆಗೆ ಬರುತ್ತಿರುವ ವಿಚಾರವನ್ನು ಮನೆಮಂದಿಗಾಗಲಿ, ಊರಿನಲ್ಲಿರುವ ಸ್ನೇಹಿತರಿಗಾಗಲಿ ತಿಳಿಸದೆ ಅನಿರೀಕ್ಷಿತವಾಗಿ ಬಂದಿದ್ದಾನೆ. ಬಂದವನು ನೇರ ಮನೆಗೆ ಹೋಗದೆ, ಗಂಗೊಳ್ಳಿಯ ಮೀನು ಮಾರುಕಟ್ಟೆಗೆ ಬಂದಿದ್ದಾನೆ. ಅಲ್ಲಿ ಆತನ ತಾಯಿ ಮೀನು ಮಾರುತ್ತಿದ್ದರು. ಈ ವೇಳೆ ಅಲ್ಲಿ ನಡೆದ ಸ್ವಾರಸ್ಯಕರವೂ ಭಾವನಾತ್ಮಕವೂ ಆದ ಘಟನೆಯ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಗಂಗೊಳ್ಳಿ ನಿವಾಸಿ ರೋಹಿತ್ ಮೂರು ವರ್ಷಗಳ ಹಿಂದೆ ದುಬೈಗೆ ತೆರಳಿದ್ದರು. ಎರಡು ದಿನಗಳ ಹಿಂದೆ ಊರಿನ ಗೆಳೆಯರಿಗಾಗಲೀ, ಮನೆಯವರಿಗಾಗಲೀ ತಿಳಿಸದೆ ಸರ್ಪ್ರೈಸ್ ಕೊಡುವುದಕ್ಕಾಗಿ ನೇರವಾಗಿ ಬಂದಿದ್ದಾನೆ. ಬೆಳಗ್ಗೆ ನೇರವಾಗಿ ಗಂಗೊಳ್ಳಿ ಮೀನು ಮಾರುಕಟ್ಟೆಗೆ ಬಂದಿದ್ದ ರೋಹಿತ್, ತಾಯಿ ಮೀನು ಮಾರಾಟದಲ್ಲಿ ಬಿಜಿಯಾಗಿರುವುದನ್ನು ನೋಡಿದ್ದಾನೆ. ದೂರದಿಂದಲೇ ಮುಖಕ್ಕೆ ಟವೆಲನ್ನು ಸುತ್ತಿಕೊಂಡು ಮೀನಿನ ದರ ವಿಚಾರಿಸಲು ಮುಂದಾಗಿದ್ದಾನೆ.
ಯುವಕ ಮುಖ ತೋರಿಸದೆ, ಬಂಗುಡೆ ಮೀನಿನ ದರ ಕೇಳುತ್ತಿರುವುದರ ಬಗ್ಗೆ ತಾಯಿ ಸುಮಿತ್ರಾ ವಿಚಾರಣೆ ಮಾಡಿದ್ದಾರೆ. ಮಾತು ಕೇಳಿದಾಗ ಮಗನ ಧ್ವನಿಯಂತೇ ಕಂಡಿದ್ದರಿಂದ ತಾಯಿಗೆ ಸಂಶಯ ಆಗಿದೆ. ಹೀಗಾಗಿ ಮೀನನ್ನು ಬಿಟ್ಟು ಯುವಕನ ಬಳಿಗೆ ಎದ್ದು ಬಂದು ಮುಖದ ಟವಲ್ ತೆಗೆದಿದ್ದಾರೆ. ಮಗನ ಮುಖ ನೋಡುತ್ತಲೇ ಅಪ್ಪಿ ಹಿಡಿದು ಕಣ್ಣೀರು ಹಾಕಿದ್ದಾರೆ. ತಾಯಿ- ಮಗ ಅಪ್ಪಿ ಹಿಡಿದು ಆನಂದ ಭಾಷ್ಪ ಸುರಿಸಿದ ವಿಡಿಯೋ ಕುಂದಾಪುರದಲ್ಲಿ ವೈರಲ್ ಆಗಿದೆ.