ಮಂಗಳೂರು: ಚೈತ್ರಾ ಕುಂದಾಪುರ ಡೀಲ್ ಪ್ರಕರಣದಲ್ಲಿ ನಾನಿಲ್ಲ - ಗುರುಪುರ ಸ್ವಾಮೀಜಿ
Monday, September 18, 2023
ಮಂಗಳೂರು: ಚೈತ್ರಾ ಕುಂದಾಪುರ ಡೀಲ್ ಪ್ರಕರಣದಲ್ಲಿ ಇದೀಗ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರ ಹೆಸರು ಕೇಳಿ ಬಂದಿದೆ. ಈ ಬಗ್ಗೆ ಸ್ವಾಮೀಜಿಯವರೇ ಸ್ಪಷ್ಟನೆ ನೀಡಿ ಈ ಪ್ರಕರಣಕ್ಕೂ ತನಗೂ ಯಾವುದೇ ಸಂಬಂಧವಿಲ್ಲ. ಇದೊಂದು ಷಡ್ಯಂತರದ ಭಾಗವಾಗಿ ಕಂಡು ಬರುತ್ತಿದ್ದು, ಆದ್ದರಿಂದ ಸಿಸಿಬಿ ಅಧಿಕಾರಿಗಳು ಮೇಲ್ನೋಟಕ್ಕೆ ಈ ಪ್ರಕರಣದಲ್ಲಿ ಏನಾಗಿದೆ ಎಂದು ಸ್ಪಷ್ಟಪಡಿಸಲಿ ಎಂದು ಹೇಳಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಹಿಂದೂ ಮುಖಂಡ ಸತ್ಯಜಿತ್ ಸುರತ್ಕಲ್ ಜುಲೈ ತಿಂಗಳಲ್ಲಿ ಫೋನ್ ಮಾಡಿ ಈ ಪ್ರಕರಣದಲ್ಲಿ ತಮ್ಮ ಹೆಸರಿದೆ ಎಂದು ತಿಳಿಸಿದ್ದರು. ಗೋವಿಂದ ಬಾಬು ಪೂಜಾರಿಯವರು ನಿಮಗೆ ಒಂದುವರೆ ಕೋಟಿ ನೀಡಿದ್ದು ಅದನ್ನು ಅವರಿಗೆ ವಾಪಸ್ ನೀಡಿ ಎಂದು ಹೇಳಿದ್ದರು. ಈ ಪ್ರಕರಣದ ಬಗ್ಗೆ ನನಗೆ ಗೊತ್ತಿಲ್ಲ ಎಂದು ನಾನು ಆಕ್ರೋಶವಾಗಿ ಹೇಳಿದ್ದಾಗ ಆ ಬಳಿಕ ಫೋನ್ ಕರೆ ಕಡಿತ ಮಾಡಿದ್ದರು. ಬಳಿಕ ಈ ವಿಚಾರವನ್ನು ನಾನು ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಮತ್ತು ಬಜರಂಗದಳದ ಮುಖಂಡರಿಗೆ ಫೋನ್ ಮಾಡಿ ಈ ಬಗ್ಗೆ ವಿಚಾರಿಸಿದ್ದೇವೆ. ಅದಾದ ಬಳಿಕ ಮತ್ತೆ ಸತ್ಯಜಿತ್ ಸುರತ್ಕಲ್ ಫೋನ್ ಮಾಡಿ ಅದು ನೀವಲ್ಲ ಅದು ಅಭಿನವ ಸ್ವಾಮೀಜಿ ಎಂದು ಮಾತನಾಡಿದರು.
ಆ ಬಳಿಕ ನಾನು ಅಭಿನವ ಸ್ವಾಮೀಜಿ ಅವರಿಗೆ ಕೂಡ ಕರೆ ಮಾಡಿ ಈ ಬಗ್ಗೆ ವಿಚಾರಿಸಿದ್ದೆ. ಬಳಿಕ ಅಭಿನವ ಸ್ವಾಮೀಜಿ ಅವರ ಆಪ್ತರಾಗಿರುವ ಸೂಲಿಬೆಲೆ ಚಕ್ರವರ್ತಿ ಅವರಲ್ಲಿಯೂ ಮಾತನಾಡಿದೆ. ಆಗ ಸೂಲಿಬೆಲೆ ಚಕ್ರವರ್ತಿ ಈ ವಿಚಾರದಲ್ಲಿ ತಾನು ಮಾಜಿ ಸಚಿವ ಸಿ ಟಿ ರವಿ ಅವರ ಜೊತೆಗೆ ಮಾತನಾಡಿದ್ದಾಗಿಯೂ ಹೇಳಿದ್ದರು.
ಆ ಬಳಿಕ ನಾನು ಚೈತ್ರಾ ಕುಂದಾಪುರ ಅವರಿಗೆ ಫೋನ್ ಮಾಡಿ ವಿಚಾರಿಸಿದ್ದೆ. ಚೈತ್ರಾ ಕುಂದಾಪುರ ಬರೆದ ಪ್ರೇಮ ಪಾಷಾ ಎಂಬ ಕೃತಿಗೆ ಬೆನ್ನುಡಿಯನ್ನು ನಾನು ಬರೆದ ಕಾರಣ ಅವರ ಪರಿಚಯವಿತ್ತು. ಅವರಲ್ಲಿ ವಿಚಾರಿಸಿದಾಗ ಅವರು ಈ ಪ್ರಕರಣದಲ್ಲಿ ತಾನು ಇಲ್ಲ ಎಂದು ಹೇಳಿದ್ದರು. ಈ ಪ್ರಕರಣದಲ್ಲಿ ಮಾಜಿ ಸಚಿವ ಸುನಿಲ್ ಕುಮಾರ್ ಅವರ ಹೆಸರು ಬಂದಿದ್ದು, ಇದೀಗ ನನ್ನ ಹೆಸರು ಕೇಳಿ ಬರುತ್ತಿದೆ. ನಿನ್ನೆ ಸಚಿವರೊಬ್ಬರು ಹೇಳಿಕೆಯನ್ನು ನೀಡಿ ಈ ಪ್ರಕರಣದಲ್ಲಿ ಬಿಜೆಪಿಯ ದೊಡ್ಡ ಮುಖಂಡರೊಬ್ಬರ ಹೆಸರು ಇದೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ನಾನು ಸಿಸಿಬಿ ಅಧಿಕಾರಿಗಳು ಮೇಲ್ನೋಟಕ್ಕೆ ಕಂಡುಬಂದಿರುವ ಅಂಶಗಳ ಬಗ್ಗೆ ಪ್ರಕಟಣೆಯನ್ನು ನೀಡಬೇಕು ಎಂದು ಆಗ್ರಹಿಸುತ್ತೇನೆ ಎಂದು ತಿಳಿಸಿದ್ದಾರೆ.
ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರತಿಕ್ರಿಯೆ
ಗೋವಿಂದ ಬಾಬು ಪೂಜಾರಿಗೆ 5 ಕೋಟಿ ವಂಚಿಸಿದ ಪ್ರಕರಣದಲ್ಲಿ "ಸ್ವಾಮೀಜಿಯೊಬ್ಬರ ಹೆಸರಿದೆ" ಎಂದು ಫೋನ್ ಮಾಡಿ ಹೇಳಿದ್ದಕ್ಕೆ (ಗೋವಿಂದ ಪೂಜಾರಿ ದೂರು ದಾಖಲಿಸುವ ಪೂರ್ವದಲ್ಲಿ) ಸತ್ಯಜಿತ್ ಸುರತ್ಕಲ್ ಮೇಲೆ ಮಂಗಳೂರಿನ ವಜ್ರದೇಹಿ ಸ್ವಾಮಿ ಕೆಂಡಾಮಂಡಲರಾದರಂತೆ, "ನನ್ನ ಹೆಸರೆತ್ತಿದರೆ ಸರಿ ಇರುವುದಿಲ್ಲ" ಎಂದು ಸತ್ಯಜಿತ್ ರಿಗೆ "ಥ್ರೆಟ್" ಕೊಟ್ರಂತೆ. ಆ ಮೇಲೆ ಗಾಭರಿಯಿಂದ ಚಕ್ರವರ್ತಿಗೆ ಫೋನ್ ಮಾಡಿದಾಗ PA ಫೋನ್ ಎತ್ತಿದ್ರಂತೆ. ಆಗಲೂ ಕೆಂಡಾಮಂಡಲ ಆಗಿ ಮಾತಾಡಿದ್ರಂತೆ. ಆಗ ಸನ್ಮಾನ್ಯ ಚಕ್ರವರ್ತಿಗಳು ನಗುತ್ತಾ "ನನ್ನ ಹೆಸರೇನಾದರು ಉಲ್ಲೇಖ ಆಗಿದ್ಯಾ ?" ಎಂದು ಕೇಳಿದ್ರಂತೆ. ಯುವಬ್ರಿಗೇಡ್ ನಲ್ಲಿ ಸಕ್ರಿಯ ಆಗಿರುವ ನಿಮ್ಮ(ಚಕ್ರವರ್ತಿ ಯ) ಆಪ್ತ ಹಾಲ ಸ್ವಾಮಿ ಹೆಸರಿರುವುದರಿಂದ ಅದು ನಿಮಗೂ(ಚಕ್ರವರ್ತಿಗೆ) ತಳಕು ಹಾಕುತ್ತದೆ ಎಂದು ಸ್ವಾಮಿ( ವಜ್ರದೇಹಿ ) ಹೇಳಿದ್ರಂತೆ. ಆಗ ಚಕ್ರವರ್ತಿ "ಈ ವಿಷಯ ನಾನು ಸಿ ಟಿ ರವಿ ಜೊತೆ ಈಗಾಗಲೆ ಚರ್ಚಿಸಿದ್ದೇನೆ" ಎಂದು ಹೇಳಿದ್ರಂತೆ. ಈ ಎಲ್ಲಾ ವಿಷಯ ಶರಣ್ ಪಂಪ್ ವೆಲ್, ಪುನೀತ್ ಅತ್ತಾವರ ಮುಂತಾದ ಹಿಂದುತ್ವದ ನಾಯಕರ ಜೊತೆ ಸ್ವಾಮಿಗಳು ಚರ್ಚಿಸಿದರಂತೆ. ಚಕ್ರವರ್ತಿ ಸಲಹೆಯಂತೆ ತಮಗೆ ಆಪ್ತರಾದ ಚೈತ್ರಾ ಜೊತೆ ವಜ್ರದೇಹಿಗಳು ಫೋನ್ ನಲ್ಲಿ ಮಾತಾಡಿ ವಿವರ ಪಡೆದು ಎಚ್ಚರಿಕೆ ಮಾತು ಹೇಳಿದ್ರಂತೆ. ಈಗ CCB ನೋಟೀಸು ಕೊಟ್ಟರೆ ಸೀದಾ ಹೋಗಿ ಸ್ವಾಮಿಗಳು ಎಲ್ಲಾ ವಿಷಯ ಬಿಡಿಸಿ ಹೇಳುತ್ತಾರಂತೆ.
ಇದೆಲ್ಲವೂ ವಜ್ರದೇಹಿ ಸ್ವಾಮಿಗಳು ಮಾಧ್ಯಮದ ಮುಂದೆ ಹೇಳಿದ ಮಾತುಗಳು. ಚೈತ್ರಾ ಕುಂದಾಪುರ ಕೊಟ್ಟಿರುವ ಲಿಖಿತ ಹೇಳಿಕೆಯಲ್ಲಿ ಈ ಸ್ವಾಮಿಗಳ ಹೆಸರು ಉಲ್ಲೇಖ ಆಗಿದೆ (ಹಾಗಂತ ಸ್ವಾಮಿಗಳು ಮಾಧ್ಯಮ ಬೈಟ್ ನಲ್ಲಿ ಹೇಳಿದ್ದಾರೆ). ಸ್ವಾಮಿಗಳ ಹೇಳಿಕೆಯಲ್ಲಿ ಚಕ್ರವರ್ತಿ ಸೂಲಿಬೆಲೆ, ಶರಣ್ ಪಂಪ್ ವೆಲ್ ಹೆಸರು ಉಲ್ಲೇಖ ಆಗಿದೆ. ಸೂಲಿಬೆಲೆ ಬಾಯಲ್ಲಿ ಸಿಟಿ ರವಿ ಹೆಸರು ಉಲ್ಲೇಖ ಆಗಿದೆ.
ಇದೀಗ ಮ್ಯಾರಥಾನ್ ರಿಲೇ ಓಟದಂತೆ ಒಬ್ಬರಿಂದ ಒಬ್ಬರಿಗೆ ಪ್ರಕರಣದ ಸಂಪರ್ಕ ಹಬ್ಬುತ್ತಿದೆ. ದಿನದಿಂದ ದಿನಕ್ಕೆ ಪ್ರಕರಣದ ನಿಗೂಢತೆ, ವ್ಯಾಪ್ತಿ ಊಹಿಸಿರುವುದಕ್ಕಿಂತ ಹೆಚ್ಚು ಹಿಗ್ಗುತ್ತಿದೆ. ಹಾಲ ಸ್ವಾಮಿ ಬಂಧನ ನಡೆದರೆ ಮತ್ತಷ್ಟು ರೋಚಕ ಕತೆಗಳು ಹೊರಬಬರಬಹುದು. ಹೀಗಿದ್ದರೂ ಕಾಂಗ್ರೆಸ್ ಸರಕಾರ ಪ್ರಕರಣದ ನ್ಯಾಯಯುತ ತನಿಖೆ ನಡೆಯಗೊಡುವುದು ಅನುಮಾನ ಎಂಬ ಮಾತುಗಳೆ ಎಲ್ಲೆಡೆ ಕೇಳಿಬರುತ್ತಿದೆ.
ಪುನೀತ್ ಕೆರೆಹಳ್ಳಿ ಬಿಡುಗಡೆ ಪ್ರಕರಣ ರಾಜ್ಯ ಸರಕಾರದ ಮೇಲಿನ ಈ ಅನುಮಾನವನ್ನು ಮತ್ತಷ್ಟು ದಟ್ಟಗೊಳಿಸಿದೆ. ಮೂರನೆ ದರ್ಜೆಯ ಕ್ರಿಮಿನಲ್ ಆಗಿರುವ ಕೆರೆಹಳ್ಳಿ, ಸಿದ್ದರಾಮಯ್ಯ ಸರಕಾರದ ವಿಶೇಷ ಕಾರುಣ್ಯದ ಕಾರಣ ಬಿಡುಗಡೆ ಹೊಂದಿ ಮಹಾನ್ ಹೋರಾಟಗಾರನಂತೆ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ತನ್ನ ವಕೀಲರ ಜೊತೆ ಪತ್ರಿಕಾಗೋಷ್ಟಿ ನಡೆಸಿ ಸರಕಾರ ಕ್ಷಮೆ ಯಾಚಿಸಬೇಕು ಎಂದು ಬಿಲ್ಡಪ್ ಕೊಡುತ್ತಿದ್ದಾನೆ. ಜನ ನಗುವುದೋ, ಅಳುವುದೋ ತಿಳಿಯದಂತಾಗಿದ್ದಾರೆ. ಕಾಂಗ್ರೆಸ್ ಸರಕಾರಕ್ಕೆ ಜನ ತಮ್ಮನ್ನು ಯಾಕೆ ಚುನಾಯಿಸಿದ್ದಾರೆ ಎಂಬುದು ಅರಿವಿಗೆ ಬರಲಿ. ಬದ್ದತೆ ತೋರಲಿ ಎಂದು ನಿರೀಕ್ಷೆಯೊಂದಿಗೆ ಚೈತ್ರಾ ಪ್ರಕರಣದ ಸರಿಯಾದ ತನಿಖೆಗಾಗಿ ನಾಗರಿಕ ಸಮಾಜವಾಗಿ ಒತ್ತಡ ಹೇರುವು ಕೆಲಸ ಮಾಡೋಣ.
ಮುನೀರ್ ಕಾಟಿಪಳ್ಳ