-->
ತಾಜ್ ಹೊಟೇಲ್ ಸ್ಪೋಟಿಸಲು ಇಬ್ಬರು ಪಾಕಿಸ್ತಾನಿಯರು ಬರುತ್ತಿದ್ದಾರೆ: ಅಲರ್ಟ್ ಆದ ಮುಂಬೈ ಪೊಲೀಸರು

ತಾಜ್ ಹೊಟೇಲ್ ಸ್ಪೋಟಿಸಲು ಇಬ್ಬರು ಪಾಕಿಸ್ತಾನಿಯರು ಬರುತ್ತಿದ್ದಾರೆ: ಅಲರ್ಟ್ ಆದ ಮುಂಬೈ ಪೊಲೀಸರು


ಮುಂಬೈ: ಇಲ್ಲಿನ ತಾಜ್​ ಹೋಟೆಲ್​ ಅನ್ನು ಸ್ಫೋಟಿಸಲು ಪಾಕಿಸ್ತಾನಿಗಳಿಬ್ಬರು ಮುಂಬೈ ನಗರವನ್ನು ತಲುಪಲಿದ್ದಾರೆ ಎಂದು ಮುಂಬೈ ಪೊಲೀಸರಿಗೆ ಕರೆ ಮಾಡಿ ಬೆದರಿಕೆ ಹಾಕಿರುವ ಘಟನೆ ಗುರುವಾರ ನಡೆದಿದೆ.

ಮುಂಬೈ ಪೊಲೀಸ್​ ಇಲಾಖೆಯ​ ಮುಖ್ಯ ಕಂಟ್ರೋಲ್​ ರೂಮ್​ಗೆ ಈ ಬೆದರಿಕೆ ಕರೆ ಬಂದಿದೆ. ಮುಂಬೈಯ ಲ್ಯಾಂಡ್​ಮಾರ್ಕ್​ ಆಗಿರುವ ತಾಜ್​ ಹೋಟೆಲ್​ ಅನ್ನು ಸ್ಫೋಟ ಮಾಡಲು ಪಾಕಿಸ್ತಾನದ ಇಬ್ಬರು ವ್ಯಕ್ತಿಗಳು ಸಮುದ್ರ ಮಾರ್ಗದ ಮೂಲಕ ಭಾರತದ ಗಡಿಯನ್ನು ಪ್ರವೇಶ ಮಾಡಲಿದ್ದಾರೆ ಎಂದು ಬೆದರಿಕೆ ಹಾಕಲಾಗಿದೆ.

ಕರೆ ಮಾಡಿದವನು ತನ್ನನ್ನು ತಾನು ಮುಕೇಶ್​ ಸಿಂಗ್​ ಎಂದು ಪರಿಚಯಿಸಿಕೊಂಡಿದ್ದಾನೆ. ಆದರೆ ಆತನ ನಿಜವಾದ ಹೆಸರು ಜಗದಂಬ ಪ್ರಸಾದ್ ಸಿಂಗ್ ಎಂಬುದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. 35 ವರ್ಷ ಪ್ರಾಯದ ಪ್ರಸಾದ್​ ಸಿಂಗ್, ಉತ್ತರ ಪ್ರದೇಶದ ಗೊಂಡಾ ಮೂಲದವನು. ಸದ್ಯ ಮುಂಬೈನ ಸಾಂತಾಕ್ರೂಜ್​ನಲ್ಲಿ ನೆಲೆಸಿದ್ದಾನೆ‌. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ್ದಾರೆ.

ಮುಂಬೈನ ಕೊಲಾಬಾ ಪ್ರದೇಶದಲ್ಲಿರುವ ತಾಜ್ ಹೋಟೆಲ್ ಮೇಲೆ 2008ರಲ್ಲಿ ಉಗ್ರರಿಂದ ದಾಳಿ ನಡೆದಿತ್ತು. ಈ ಘಟನೆಯಲ್ಲಿ 18 ಭದ್ರತಾ ಸಿಬ್ಬಂದಿ ಸೇರಿದಂತೆ 166 ಮಂದಿ ಮೃತಪಟ್ಟಿದ್ದರು. ಒಂಬತ್ತು ಉಗ್ರರನ್ನು ನಮ್ಮ ಯೋಧರು ಹೊಡೆದುರುಳಿಸಿದ್ದರು. ಕೊನೆಗೂ ಲಷ್ಕರ್ ಎ ತೊಯ್ಬಾ ಉಗ್ರಗಾಮಿ ಸಂಘಟನೆಯ ಅಜ್ಮಲ್ ಕಸಬ್​ನನ್ನು ಜೀವಂತವಾಗಿ ಸೆರೆ ಹಿಡಿಯುವಲ್ಲಿ ಸೇನೆ ಯಶಸ್ವಿಯಾಗಿತ್ತು. 2012ರ ನವೆಂಬರ್ 21ರಂದು ಈತನಿಗೆ ಗಲ್ಲುಶಿಕ್ಷೆ ವಿಧಿಸಲಾಯಿತು.


Ads on article

Advertise in articles 1

advertising articles 2

Advertise under the article