ಏಳು ಬಾರಿ ಗರ್ಭಪಾತ ನಟಿ ವಿಜಯಲಕ್ಷ್ಮಿ ಆರೋಪ- ಬೆನ್ನಲ್ಲೇ ಸೀಮನ್ ಗೆ ಪೊಲೀಸರಿಂದ ಕರೆ
Sunday, September 10, 2023
ಚೆನ್ನೈ: ನಟಿ ವಿಜಯಲಕ್ಷ್ಮಿ ನೀಡಿರುವ ಲೈಂಗಿಕ ದೌರ್ಜನ್ಯ ದೂರಿಗೆ ಸಂಬಂಧಿಸಿದಂತೆ ನಾಮ್ ತಮಿಳರ್ ಕಟ್ಚಿ (ಎನ್ಟಿಕೆ) ಪಕ್ಷದ ನಾಯಕ, ನಟ ಮತ್ತು ನಿರ್ದೇಶಕ ಸೀಮನ್ ರನ್ನು ಚೆನ್ನೈ ಪೊಲೀಸರು ಮಂಗಳವಾರ ವಿಚಾರಣೆ ನಡೆಸಲಿದ್ದಾರೆ. ಮದುವೆ ಮಾಡಿಕೊಳ್ಳುವುದಾಗಿ ತನಗೆ ನಂಬಿಸಿ ಮೋಸ ಮಾಡಿದ್ದಾನೆಂದು ಚೆನ್ನೈ ನಗರ ಪೊಲೀಸ್ ಆಯುಕ್ತರಿಗೆ ವಿಜಯಲಕ್ಷ್ಮೀ ದೂರು ನೀಡಿರುವ ಹಿನ್ನೆಲೆಯಲ್ಲಿ ಈ ವಿಚಾರಣೆ ನಡೆಸಲಾಗುತ್ತಿದೆ.
ಶನಿವಾರ ವಿಚಾರಣೆಗೆ ಹಾಜರಾಗುವಂತೆ ಸೀಮನ್ ಅವರಿಗೆ ಸೂಚಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಆದ್ದರಿಂದ ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ. ವಂಚನೆ ಮತ್ತು ಮಹಿಳೆಯರ ಮೇಲಿನ ಅತ್ಯಾಚಾರ ನಿಷೇಧ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಸೀಮನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವಿಜಯಲಕ್ಷ್ಮಿ ಕೂಡ ಇತ್ತೀಚೆಗೆ ಈತನ ವಿರುದ್ಧ ತಿರುವಳ್ಳೂರಿನಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿದ್ದರು. ಹಣ ಹಾಗೂ ಚಿನ್ನಾಭರಣ ಪಡೆದು ವಂಚಿಸಿರುವುದಲ್ಲದೆ, ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಲ್ಲದೆ ಬಲವಂತವಾಗಿ 7 ಬಾರಿ ಗರ್ಭಪಾತ ಮಾಡಿಸಿದ್ದಾನೆಂದು ವಿಜಯಲಕ್ಷ್ಮೀ ಗಂಭೀರ ಆರೋಪ ಮಾಡಿದ್ದಾರೆ.
ತನಿಖೆ ಆರಂಭಿಸಿರುವ ಚೆನ್ನೈ ಪೊಲೀಸರು ವಿಜಯಲಕ್ಷ್ಮೀ ಮಾಡಿರುವ ಆರೋಪ ನಿಜವೇ ಎಂದು ತಿಳಿಯಲು ಸುಮಾರು 2 ಗಂಟೆಗಳ ಕಾಲ 4 ಮಂದಿ ಸ್ತ್ರೀರೋಗ ತಜ್ಞರ ಮೂಲಕ ನಟಿ ವಿಜಯಲಕ್ಷ್ಮಿ ಅವರ ಗರ್ಭಕೋಶಕ್ಕೆ ‘ಅಲ್ಟ್ರಾಸೌಂಡ್’ ಎಂಬ ವೈದ್ಯಕೀಯ ಪರೀಕ್ಷೆ ಮಾಡಿಸಿದ್ದಾರೆ. ತನಿಖೆ ಮುಂದುವರಿದಿದ್ದು, ಸೀಮನ್ ಹೇಳಿಕೆ ಪಡೆಯಲಿದ್ದಾರೆ.
ವಿಜಯಲಕ್ಷ್ಮಿ 2011ರಲ್ಲಿ ಇದೇ ಆರೋಪದೊಂದಿಗೆ ಪೊಲೀಸರನ್ನು ಸಂಪರ್ಕಿಸಿದ್ದರು. ಎಐಎಡಿಎಂಕೆ ಸರ್ಕಾರ ಅಧಿಕಾರದಲ್ಲಿದ್ದಾಗ ಯಾವುದೇ ತನಿಖೆ ನಡೆಸಲಿಲ್ಲ ಎಂದು ವಿಜಯಲಕ್ಷ್ಮಿ ಹೇಳಿದರು. ಆದರೆ ಡಿಎಂಕೆ ಸರ್ಕಾರದ ಮೇಲೆ ನಂಬಿಕೆ ಇದ್ದ ಕಾರಣ ಮತ್ತೆ ದೂರು ದಾಖಲಿಸಿದ್ದೇನು ಎಂದು ವಿಜಯಲಕ್ಷ್ಮೀ ಹೇಳಿದ್ದಾರೆ.