ಮದುವೆಗಿಟ್ಟಿದ್ದ ಕೋಟ್ಯಂತರ ರೂ. ಚಿನ್ನಾಭರಣ, 10ಲಕ್ಷ ಕದ್ದೊಯ್ದ ಕಳ್ಳ ಪೊಲೀಸ್ ಬಲೆಗೆ
Wednesday, October 4, 2023
ಬೆಂಗಳೂರು: ನಕಲಿ ಕೀ ಬಳಸಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ 10 ಲಕ್ಷ ರೂ. ನಗದು ದೋಚಿದ್ದ ಆರೋಪಿಯನ್ನು ಬಂಧಿಸಿರುವ ಬೆಂಗಳೂರು ತಿಲಕ್ ನಗರ ಪೊಲೀಸರು, ಆತನಿಂದ 1.10 ಕೋಟಿ ರೂ. ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಿದ್ದಾರೆ.
ಜಯನಗರದ ಒಂದನೇ ಬ್ಲಾಕ್‌ನ ಭೈರಸಂದ್ರದ ನಿವಾಸಿ ಮುಹಮ್ಮದ್ ರಫೀಕ್ ಯಾನೆ ರಫೀಕ್(35) ಬಂಧಿತ ಆರೋಪಿ.
ಸೆ.23ರಂದು ತಿಲಕ್ ನಗರದ ವ್ಯಕ್ತಿಯೊಬ್ಬರು ತಮ್ಮ ಮೊಮ್ಮಗಳ ವಿವಾಹಕ್ಕೆ ಸುಮಾರು 2.15 ಕೆಜಿ ಚಿನ್ನಾಭರಣ ಖರೀದಿಸಿದ್ದರು. ಅಲ್ಲದೆ ಮದುವೆ ಖರ್ಚಿಗೆಂದು 10 ಲಕ್ಷ ರೂ. ನಗದನ್ನು ತಂದಿಟ್ಟಿದ್ದರು.ಈ ಮಧ್ಯೆ ಸಂಬಂಧಿಕರ ವಿವಾಹಕ್ಕೆಂದು ಇವರು ಕುಟುಂಬ ಸಹಿತ ಮನೆಗೆ ಬೀಗ ಹಾಕಿಕೊಂಡು ರಾಮನಗರಕ್ಕೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಹತ್ತಿರದ ಸಂಬಂಧಿಯೇ ಆಗಿದ್ದ ಆರೋಪಿಯು ನಕಲಿ ಕೀ ಬಳಸಿ ಒಳನುಗ್ಗಿ, ಸುಮಾರು 2.15 ಕೆಜಿ ಚಿನ್ನಾಭರಣ, 10 ಲಕ್ಷ ರೂ. ನಗದು ಕಳ್ಳತನ ಮಾಡಿ ಪರಾರಿಯಾಗಿದ್ದಾನೆ.
ಮದುವೆ ಕಾರ್ಯಕ್ರಮ ಮುಗಿಸಿ ವಾಪಸ್ ಆಗಿರುವ ಕುಟುಂಬಸ್ಥರು ಕಳ್ಳನ ಕೈಚಳಕದಿಂದ ಆಘಾತಕ್ಕೊಳಗಾಗಿದ್ದು, ತಕ್ಷಣ ತಿಲಕ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತಿಲಕ್‌ನಗರ ಪೊಲೀಸ್ ಇನ್ ಸ್ಪೆಕ್ಟರ್ ವಿಶ್ವನಾಥ್ ಅವರ ನೇತೃತ್ವದ ವಿಶೇಷ ತಂಡ ಕಾರ್ಯಾಚರಣೆ ಕೈಗೊಂಡಿದೆ. ತಂತ್ರಜ್ಞಾನದ ನೆರವು ಇನ್ನಿತರ ಮಾಹಿತಿಯನ್ನು ಆಧರಿಸಿ ಆರೋಪಿಯನ್ನು ಬಂಧಿಸಿ ಆತನಿಂದ ರೂ 1,10,60,000 ರೂ. ಬೆಲೆ ಬಾಳುವ 1 ಕೆಜಿ 800 ಗ್ರಾಂ ಚಿನ್ನಾಭರಣಗಳು, 74 ಸಾವಿರ ರೂ. ನಗದು ಜಪ್ತಿ ಮಾಡಿದೆ ಎಂದು ತಿಳಿದು ಬಂದಿದೆ.
ಆರೋಪಿ ಕದ್ದ ಹಣದಿಂದ ಆನ್ಲೈನ್ ಲೋನ್ ಆ್ಯಪ್ ನಿಂದ ಮಾಡಿರುವ ಸಾಲವನ್ನು ತೀರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.