ಉಳ್ಳಾಲ: ಈದ್ ಮಿಲಾದ್ ಮೆರವಣಿಗೆಯಲ್ಲಿ ಕರ್ಕಶ ಹಾರ್ನ್, ಸೈಲೆನ್ಸರ್ ಅಬ್ಬರ - 15ಮಂದಿ ಯುವಕರಿಗೆ ದಂಡ, ಖಡಕ್ ವಾರ್ನಿಂಗ್
Wednesday, October 11, 2023
ಉಳ್ಳಾಲ: ಈದ್ ಮಿಲಾದ್ ನ ವೇಳೆ ನಡೆದ ವಾಹನ ಜಾಥಾದ ನೆಪದಲ್ಲಿ ಕರ್ಕಶ ಹಾರ್ನ್, ಸೈಲೆನ್ಸರ್ ಗಳಿಂದ ಅಬ್ಬರಿಸಿ ಸಾರ್ವಜನಿಕರಿಗೆ ತೊಂದರೆ ನೀಡಿದ್ದ 15ಮಂದಿ ಯುವಕರ ವಿರುದ್ಧ ಉಳ್ಳಾಲ ಪೊಲೀಸರು ದಂಡ ವಿಧಿಸಿದ್ದಲ್ಲದೆ ಪೋಷಕರ ಮುಂದೆಯೇ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಕಳೆದ ಸೆ.28 ರಂದು ಉಳ್ಳಾಲ ದರ್ಗಾದಲ್ಲಿ ನಡೆದಿದ್ದ ಈದ್ ಮಿಲಾದ್ ಹಿನ್ನೆಲೆಯಲ್ಲಿ ಯುವಕರ ಗುಂಪೊಂದು ಕುತ್ತಾರು, ಮಾಡೂರು ಕಡೆಯಿಂದ ವಾಹನ ಜಾಥಾ ನಡೆಸಿ ಕರ್ಕಶ ಹಾರ್ನ್, ಸೈಲೆನ್ಸರ್ ಗಳಿಂದ ಕಿರಿಕಿರಿ ಉಂಟು ಮಾಡಿದ್ದರು. ಅಲ್ಲದೆ ಉಳ್ಳಾಲದ ಅಬ್ಬಕ್ಕ ಸರ್ಕಲ್ ಏರಿ ವಿಕೃತವಾಗಿ ವರ್ತಿಸಿ ಘೋಷಣೆಗಳನ್ನು ಕೂಗಿದ್ದರು. ಈ ವೀಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಯುವಕರ ವರ್ತನೆಗೆ ಮುಸ್ಲಿಂ ಧರ್ಮೀಯರೇ ಆಕ್ಷೇಪ ವ್ಯಕ್ತಪಡಿಸಿದ್ದು ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಈ ಘಟನೆಯ ಸಂಬಂಧ ಉಳ್ಳಾಲ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿದ್ದರು.
ಮಾಡೂರಿನ ಇಬ್ರಾಹಿಂ, ಅಂಬ್ಲಮೊಗರುವಿನ ಮಹಮ್ಮದ್ ಅರ್ಷಾದ್ ಬಶೀರ್, ಪಡು ಮಾರ್ನಾಡುವಿನ ಅಶೀಶ್ ಪಿಂಟೊ, ಮಂಜನಾಡಿ ಗ್ರಾಮದ ಕೆ.ಎ.ಇಸ್ಟಾಲ್ ಅಬ್ದುಲ್ ರಹಿಮಾನ್, ಇಮ್ರಾನ್, ಇಬ್ರಾಹಿಂ ಬಾತಿಷ್ ಇಸ್ಮಾಯಿಲ್, ಉಮರ್ ಫಾರೂಕ್, ಅಬ್ದುಲ್ ಖಾದರ್, ಕೆ.ಎ.ಇಸ್ಟಾಲ್, ಬಜಾಲಿನ ಮಹಮ್ಮದ್ ಹುಸೇನ್, ಕೋಟೆಕಾರಿನ ಶೌಕತ್ ಆಲಿ, ಬೆಳ್ತಂಗಡಿಯ ಮಹಮ್ಮದ್ ನಿಝಾರ್, ಮಾಡೂರಿನ ಶೇಖ್ ಖಲೀಲ್ ಅಹ್ಮದ್, ಪಾವೂರಿನ ಇಬ್ರಾಹಿಂ, ಸಜೀಪ ನಡುವಿನ ಮಹಮ್ಮದ್ ಇರ್ಷಾದ್ ಸೇರಿದಂತೆ ಒಟ್ಟು 15 ಮಂದಿ ಯುವಕರ ವಿರುದ್ಧ ಉಳ್ಳಾಲ ಪೊಲೀಸರು ಸಂಚಾರಿ ನಿಯಮ ಉಲ್ಲಂಘನೆಯಡಿ ದಂಡ ವಸೂಲು ಮಾಡಿದ್ದಾರೆ.
ಪೋಷಕರ ಸಮ್ಮುಖದಲ್ಲೇ ಉಳ್ಳಾಲ ಪೊಲೀಸ್ ಠಾಣಾ ನೂತನ ಪಿಐ ಬಾಲಕೃಷ್ಣ ಅವರು ಯುವಕರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಶಾರದಾ ಉತ್ಸವಕ್ಕೂ ಡಿ.ಜೆ ㅎ ಅಳವಡಿಸದಂತೆ ಇಲಾಖೆಯ ಆದೇಶ ಬಂದಿದ್ದು ಉಳ್ಳಾಲಕ್ಕೂ ಇದು ಅನ್ವಯಿಸಲಿದೆ ಎಂದು ಪಿಐ ಬಾಲಕೃಷ್ಣ ತಿಳಿಸಿದ್ದಾರೆ.