200 ವರ್ಷಗಳ ಕಾಲ ಗುಲಾಮರಾಗಿದ್ದ ಭಾರತೀಯರು..! : ಭಾರತ v/s ಇಂಗ್ಲೆಂಡ್ ವಿರುದ್ಧದ ವಿಶ್ವಕಪ್ ಟೂರ್ನಿಯ ಮೊದಲೇ ಪೋಸ್ಟ್ ಮಾಡಿದ ಪಾಕ್ ನಟಿ
Saturday, October 28, 2023
ನವದೆಹಲಿ: ಗುಜರಾತ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಅ.14ರಂದು ನಡೆದ ವಿಶ್ವಕಪ್ ಟೂರ್ನಿಯ 12ನೇ ಪಂದ್ಯದಲ್ಲಿ ಆತಿಥೇಯ ಭಾರತದ ವಿರುದ್ಧ ಪಾಕಿಸ್ತಾನ ಹೀನಾಯವಾದ ಸೋಲನ್ನು ಅನುಭವಿಸಿತು. ಇದು ಪಾಕಿಸ್ತಾನದ ಕ್ರೀಡಾಭಿಮಾನಿಗಳಿಗೆ ಇನ್ನೂ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದರಲ್ಲೂ ಪಾಕ್ ನಟಿ ಸೆಹರ್ ಶಿನ್ವಾರಿಗಂತೂ ಇದರಿಂದ ಮೈಉರಿ ಎದ್ದಂತಾಗಿದೆ. ಹೀಗಾಗಿ ಭಾರತದ ಸೋಲನ್ನೇ ಎದುರು ನೋಡುತ್ತಾ ಸಾಮಾಜಿಕ ಜಾಲತಾಣದಲ್ಲಿ ಭಾರತೀಯರನ್ನು ಕೆಣಕುವಂತಹ ಪೋಸ್ಟ್ ಮಾಡುತ್ತಿದ್ದಾಳೆ.
ಅ.19ರಂದು ಭಾರತ ಹಾಗೂ ಬಾಂಗ್ಲಾದೇಶದ ವಿರುದ್ಧ ವಿಶ್ವಕಪ್ ಟೂರ್ನಿಯ 17ನೇ ಪಂದ್ಯ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯಿತು. ಈ ಪಂದ್ಯಕ್ಕೂ ಮೊದಲು ಟ್ವೀಟ್ ಮಾಡಿದ್ದ ಸೆಹರ್ ಶೆನ್ವಾರಿ, ಭಾರತವನ್ನು ಸೋಲಿಸಿದ್ದಲ್ಲಿ, ಬಾಂಗ್ಲಾ ತಂಡದ ಆಟಗಾರರೊಂದಿಗೆ ಡಿನ್ನರ್ ಡೇಟ್ಗೆ ಬರಲು ಸಿದ್ಧಳಿರುವೆ ಎಂದು ಆಫರ್ ನೀಡಿದ್ದಳು. ಆದರೆ, ಬಾಂಗ್ಲಾ, ಭಾರತದ ವಿರುದ್ಧ ಸೋತಿದ್ದು, ಶಿನ್ವಾರಿಗೆ ಬಹಳ ನಿರಾಸೆಯಾಯಿತು. ಆದರೂ ಸುಮ್ಮನಾಗದ ಆಕೆ ಮತ್ತೊಂದು ಪೋಸ್ಟ್ ಮಾಡಿ, ಬೆಂಗಾಲಿ ಹುಲಿಗಳೇ ಚೆನ್ನಾಗಿ ಆಡಿದ್ದೀರಿ. ಭಾರತದ ವಿರುದ್ಧ ಕನಿಷ್ಠ ಪಕ್ಷ ಅವರದೇ ನೆಲದಲ್ಲಿ ಒಳ್ಳೆಯ ಸವಾಲು ನೀಡಿದ್ದೀರಿ ಎನ್ನುವ ಮೂಲಕ ಭಾರತೀರಯರನ್ನು ಮತ್ತೆ ಕೆಣಕಿದ್ದಳು.
ಅ.29ರಂದು ಭಾರತ ಹಾಗೂ ಇಂಗ್ಲೆಂಡ್ ನಡುವೆ ವಿಶ್ವಕಪ್ ಟೂರ್ನಿಯ 29ನೇ ಪಂದ್ಯಾಟ ನಡೆಯಲಿದೆ. ಇದೀಗ ಸೆಹರ್ ಶಿನ್ವಾರಿ ಮತ್ತೆ ಪೋಸ್ಟ್ ಮಾಡಿದ್ದು, 200 ವರ್ಷಗಳ ಕಾಲ ಭಾರತೀಯರನ್ನು ಗುಲಾಮರನ್ನಾಗಿಸಿದ ಬ್ರಿಟಿಷರು ಲಖನೌ ಸ್ಟೇಡಿಯಂನಲ್ಲಿ ತಮ್ಮ ಸ್ಥಾನಮಾನವನ್ನು ತೋರಿಸಲು ಬರುತ್ತಿದ್ದಾರೆ ಎಂದು ನಾಲಿಗೆ ಹರಿಬಿಟ್ಟಿದ್ದಾಳೆ.
ಶಿನ್ವಾರಿ ಮಾಡಿರುವ ಟ್ವೀಟ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಬರ್ನಲ್ನ ಇಮೇಜ್ಗಳನ್ನು ಪೋಸ್ಟ್ ಮಾಡಿ ಶಿನ್ವಾರಿಯ ಕಾಲೆಳೆಯುತ್ತಿದ್ದಾರೆ. ಮೊದಲು ನಿಮ್ಮ ದೇಶದ ಬಗ್ಗೆ ಯೋಚಿಸು ಆಮೇಲೆ ಭಾರತವನ್ನು ಸೋಲಿಸುವ ಬಗ್ಗೆ ಮಾತಾಡು ಎಂದು ಕಿಡಿಕಾರಿದ್ದಾರೆ. ಅಲ್ಲದೆ, ನಿಮ್ಮ ಬಾಬರ್ ಅಜಾಮ್ ಉತ್ತಮ ಫಿನಿಶರ್ ಆಗಿದ್ದು, ಮುಂದೊಮ್ಮೆ ನಿಮ್ಮ ಪಾಕ್ ತಂಡವನ್ನೇ ಫಿನಿಶ್ ಮಾಡ್ತಾರೆ ಎಂದು ಶಿನ್ವಾರಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಈ ಹಿಂದೆ ಬಂಧಿಸಿದಾಗ ದೇಶಾದ್ಯಂತ ಹಿಂಸಾಚಾರ ಭುಗಿಲೆದ್ದಿತ್ತು. ಈ ವೇಳೆ ಟ್ವೀಟ್ ಮಾಡಿದ್ದ ಶಿನ್ವಾರಿ, ಪಾಕ್ನಲ್ಲಿ ನಿರ್ಮಾಣವಾಗಿರುವ ನಾಗರಿಕ ಯುದ್ಧದಂತಹ ಪರಿಸ್ಥಿತಿ ಹಾಗೂ ಗಲಭೆಗೆ ಪ್ರಧಾನಿ ಮೋದಿ ಕಾರಣ ಎನ್ನುವ ಮೂಲಕ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಳು. ನನ್ನ ದೇಶ ಪಾಕಿಸ್ತಾನದಲ್ಲಿ ಈಗ ಉಂಟಾಗಿರುವ ಅವ್ಯವಸ್ಥೆ ಮತ್ತು ಭಯೋತ್ಪಾದನೆಯನ್ನು ಹರಡುತ್ತಿರುವ ಭಾರತದ ಪ್ರಧಾನಿ ಮತ್ತು ಭಾರತೀಯ ಗುಪ್ತಚರ ಸಂಸ್ಥೆ RAW ವಿರುದ್ಧ ನಾನು ದೂರು ದಾಖಲಿಸಬೇಕಾಗಿದೆ, ಯಾರಾದರೂ ದೆಹಲಿ ಪೊಲೀಸರ ವೆಬ್ಸೈಟ್ ಲಿಂಕ್ ಇದ್ದರೆ ಕಳುಹಿಸಿಕೊಡಿ ಎಂದು ಕೇಳಿದ್ದಾಳೆ. ಭಾರತೀಯ ನ್ಯಾಯಾಲಯಗಳು ಸ್ವತಂತ್ರವಾಗಿದ್ದರೆ ಅಲ್ಲಿನ ಸುಪ್ರೀಂ ಕೋರ್ಟ್ ನನಗೆ ನ್ಯಾಯವನ್ನು ನೀಡುತ್ತದೆ ಎಂದು ನನಗೆ ಖಾತ್ರಿಯಿದೆ ಎಂದು ಸೆಹರ್ ಶಿನ್ವಾರಿ ಟ್ವೀಟ್ನಲ್ಲಿ ಹೇಳಿಕೊಂಡಿದ್ದಳು. ನಟಿಯ ಟ್ವೀಟ್ಗೆ ಪ್ರತಿಕ್ರಿಯಿಸಿದ್ದ ದೆಹಲಿ ಪೊಲೀಸರು ನಮ್ಮ ಕಾರ್ಯವ್ಯಾಪ್ತಿ ಪಾಕಿಸ್ತಾನಕ್ಕೆ ಒಳಪಡುವುದಿಲ್ಲ. ನಿಮ್ಮ ದೇಶದಲ್ಲಿ ಇಂಟರ್ನೆಟ್ ಸೌಲಭ್ಯ ಕಡಿತಗೊಂಡಿದ್ದರೂ ನೀವು ಹೇಗೆ ಟ್ವೀಟ್ ಮಾಡುತ್ತಿದ್ದೀರಾ ಎಂದು ಪ್ರಶ್ನಿಸುವ ಮೂಲಕ ಟಾಂಗ್ ಕೊಟ್ಟಿದ್ದರು. ಶಿನ್ವಾರಿ ತನ್ನ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದರು.