ಆಪರೇಷನ್ ಅಜಯ್: ಯುದ್ಧಪೀಡಿತ ಇಸ್ರೇಲ್ ನಿಂದ ಮೊದಲ ಏರ್ ಲಿಫ್ಟ್ ನಲ್ಲಿ ತಾಯ್ನಾಡಿಗೆ ಮರಳಿದ 212ಮಂದಿ ಭಾರತೀಯರು
Friday, October 13, 2023
ನವದೆಹಲಿ: ಯುದ್ಧಪೀಡಿತ ಇಸ್ರೇಲ್ನಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ಮರಳಿ ತಾಯ್ನಾಡಿಗೆ ಕರೆತರಲು ಆಪರೇಷನ್ ಅಜಯ್ ಕಾರ್ಯಾಚರಣೆ ಆರಂಭವಾಗಿದೆ. 212 ಭಾರತೀಯರನ್ನು ಏರ್ ಲಿಫ್ಟ್ ಮಾಡಿರುವ ಮೊದಲ ವಿಶೇಷ ವಿಮಾನ ಶುಕ್ರವಾರ ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.
ಇಸ್ರೇಲ್ನಿಂದ ಆಗಮಿಸಿದ ಭಾರತೀಯ ಪ್ರಜೆಗಳನ್ನು ಬರಮಾಡಿಕೊಳ್ಳಲು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ವಿಮಾನ ನಿಲ್ದಾಣದಲ್ಲಿ ಖುದ್ದು ಹಾಜರಿದ್ದರು. ಗುರುವಾರ ಸಂಜೆ ಈ ವಿಶೇಷ ವಿಮಾನವು ಇಸ್ರೆಲ್ನ ಟೆಲ್ ಅವೀವ್ನಲ್ಲಿರುವ ಬೆನ್ ಗುರಿಯಾನ್ ವಿಮಾನ ನಿಲ್ದಾಣದಿಂದ ಹೊರಟಿದೆ. ಈ ವಿಮಾನದಲ್ಲಿ 211 ವಯಸ್ಕರು ಮತ್ತು ಒಂದು ಮಗು ಸೇರಿದಂತೆ ಒಟ್ಟು 212 ಭಾರತೀಯರಿದ್ದರು. ಬೆನ್ ಗುರಿಯಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇಸ್ರೇಲ್ನ ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಇದು ಲಾಡ್ ನಗರದ ಉತ್ತರ ಹೊರವಲಯದಲ್ಲಿದೆ.
ಭಾರತೀಯರ ರಕ್ಷಣೆಗೆ ಇಸ್ರೇಲ್ನಲ್ಲಿರುವ ಭಾರತೀಯ ಎಂಬೆಸಿ ಮಿಷನ್ ಡೇಟಾಬೇಸ್ ಅನ್ನು ಆರಂಭಿಸಿದೆ. ಮೊದಲು ಯಾರು ನೋಂದಾಯಿಸಿಕೊಂಡಿದ್ದಾರೋ ಅವರಿಗೆ ಮೊದಲ ಹಂತದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಪ್ರಯಾಣದ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸುತ್ತಿದೆ.
ಅ.7ರ ಶನಿವಾರ ಪ್ಯಾಲೆಸ್ತೈನ್ನ ಹಮಾಸ್ ಉಗ್ರರ ಗುಂಪು ಇಸ್ರೇಲ್ ಮೇಲೆ ಏಕಾಏಕಿ 5 ಸಾವಿರ ರಾಕೆಟ್ಗಳ ದಾಳಿ ನಡೆಸಿದೆ. ಬಳಿಕ ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ಯುದ್ಧ ಆರಂಭವಾಗಿದೆ. ಯುದ್ಧ ಆರಂಭವಾದ ದಿನವೇ ಏರ್ ಇಂಡಿಯಾ ವಿಮಾನ ಸಂಸ್ಥೆಯು ತನ್ನ ವಿಮಾನಗಳ ಸಂಚಾರವನ್ನು ಅಮಾನತಿನಲ್ಲಿ ಇಟ್ಟಿದೆ. ಈವರೆಗೂ ತನ್ನ ಕಾರ್ಯಾಚರಣೆಯನ್ನು ಏರ್ ಇಂಡಿಯಾ ಆರಂಭಿಸಿಲ್ಲ. ಆದ್ದರಿಂದ ಇಸ್ರೇಲ್ನಲ್ಲಿ ಸಿಲುಕಿ ಭಯದಲ್ಲೇ ದಿನ ಕಳೆಯುತ್ತಿರುವ ಭಾರತೀಯರ ನೆರವಿಗೆ ಕೇಂದ್ರ ಸರ್ಕಾರ ಆಪರೇಷನ್ ಅಜಯ್ ಹೆಸರಿನಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ.
ಯುದ್ಧದ ಭೀತಿಯಲ್ಲಿದ್ದ ಭಾರತೀಯರು ಸ್ವದೇಶಕ್ಕೆ ಹಿಂತಿರುಗಲು ‘ಆಪರೇಷನ್ ಅಜಯ್’ ಅಡಿಯಲ್ಲಿ ಟೆಲ್ ಅವಿವ್‌ನಿಂದ ಕಾರ್ಯನಿರ್ವಹಿಸುತ್ತಿರುವ ವಿಶೇಷ ವಿಮಾನ ಹತ್ತಲು ಉದ್ದನೆಯ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ಕಂಡುಬಂದಿದೆ. ಇಸ್ರೇಲ್ನಲ್ಲಿ 18 ಸಾವಿರ ಮತ್ತು ಪ್ಯಾಲೆಸ್ತೈನ್ನಲ್ಲಿ 17 ಸಾವಿರ ಮಂದಿ ಭಾರತೀಯರಿದ್ದಾರೆ.