ಅರಣ್ಯಾಧಿಕಾರಿಗಳ ಸೆರೆ ಸಿಕ್ಕ 8ಮಂದಿ ಆನೆ ದಂತಚೋರರು
Thursday, October 12, 2023
ಬೆಂಗಳೂರು: ಜೈಲೋ ಕಾರಿನಲ್ಲಿ ಆನೆ ದಂತದ 9 ತುಂಡುಗಳನ್ನು ಸಾಗಾಟ ಮಾಡುತ್ತಿದ್ದ ಎಂಟು ಮಂದಿ ದಂತಚೋರರನ್ನು ಅರಣ್ಯ ಸಂಚಾರ ದಳದ ಅಧಿಕಾರಿಗಳು ಬಂಧಿಸಿದ್ದಾರೆ.
ತಮಿಳುನಾಡು ಮೂಲದ ಐಯ್ಯನಕುಟ್ಟಿ ಕುಜಂತಾಯ್ (53), ಯು. ರತ್ನ (46), ಕೃಷ್ಣಮೂರ್ತಿ ಗೋಪಾಲ್ (35), ಎಂ. ರವಿ (44), ಸುಬ್ರಮಣ್ಯಪುರದ ನಾರಾಯಣಸ್ವಾಮಿ (50), ಕೊಡಿಗೇಹಳ್ಳಿಯ ಎ. ದಿನೇಶ್ (42), ಎಸ್. ಮನೋಹರ್ ಪಾಂಡೆ (61) ಮತ್ತು ಎಂ. ವೆಂಕಟೇಶ್ (51) ಬಂಧಿತ ಆನೆ ದಂತಚೋರರು.
ಆರೋಪಿಗಳಿಂದ ಆನೆದಂತದ ತುಂಡುಗಳು, ಮೊಬೈಲ್, ಜೈಲೋ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅ.10ರಂದು ರಾಮನಗರ ಜಿಲ್ಲೆಯ ಕೋಡಿಹಳ್ಳಿ-ಹುಣಸನಹಳ್ಳಿ ವ್ಯಾಪ್ತಿಯಲ್ಲಿ ಮಹೀಂದ್ರ ಜೈಲೋ ಕಾರಿನಲ್ಲಿ ಆನೆ ದಂತ ಸಾಗಾಟ ಮಾಡುತ್ತಿದ್ದ ಬಗ್ಗೆ ಅರಣ್ಯ ಸಂಚಾರ ದಳದ ಅಧಿಕಾರಿಗಳಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಅರಣ್ಯಾಧಿಕಾರಿಗಳ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ವಾಹನ ತಪಾಸಣೆ ನಡೆಸಿದಾಗ 9 ಆನೆ ದಂತದ ತುಂಡುಗಳು ಪತ್ತೆಯಾಗಿವೆ. ಆನೆ ದಂತದ ತುಂಡುಗಳನ್ನು ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.