ಮೆಕ್ಕಾದಲ್ಲಿ ಭಾರತ್ ಜೋಡೊ ಪೋಸ್ಟರ್ ಪ್ರದರ್ಶನ : 8ತಿಂಗಳ ಕಾಲ ಸೌದಿ ಅರೇಬಿಯಾದಲ್ಲಿ ಸೆರೆವಾಸ ಅನುಭವಿಸಿದ ಯುವ ಕಾಂಗ್ರೆಸ್ ನಾಯಕ
Saturday, October 14, 2023
ನವದೆಹಲಿ: ಸೌದಿ ಅರೇಬಿಯಾದ ಧಾರ್ಮಿಕ ಕ್ಷೇತ್ರ ಮೆಕ್ಕಾದ ಕಾಭಾದ ಎದುರು ನಿಯಮ ಉಲ್ಲಂಘಿಸಿ ಭಾರತ ಜೋಡೋ ಯಾತ್ರೆಯ ಪೋಸ್ಟರ್ ಪ್ರದರ್ಶಿಸಿ ಜೈಲು ಸೇರಿದ್ದ ಯುವ ಕಾಂಗ್ರೆಸ್ ನಾಯಕ ರಾಜಾ ಖಾದ್ರಿ (27) ಎಂಟು ತಿಂಗಳ ಸೆರೆವಾಸದ ಬಳಿಕ ಭಾರತಕ್ಕೆ ಮರಳಿದ್ದಾರೆ.
ಸೌದಿಯ ಜೈಲಿನಲ್ಲಿ ತಾವು ನರಕಯಾತನೆ ಅನುಭವಿಸಿದ್ದಾಗಿ ಮಾಧ್ಯಮದವರ ಬಳಿ ಹೇಳಿಕೊಂಡಿದ್ದಾರೆ.ಮಧ್ಯಪ್ರದೇಶದ ನಿವಾರಿ ಮೂಲದ ರಾಜಾಖಾದ್ರಿ, ಹೊರದೇಶದ ನಿಯಮ ತಿಳಿಯದೆ ಈ ರೀತಿ ಮಾಡಿದ್ದೇನೆ. ಮೊದಲಿಗೆ ತನ್ನನ್ನು ಸೌದಿಯಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು. ಮೊದಲ ಎರಡು ತಿಂಗಳುಗಳ ಕಾಲ ನನಗೆ ಬೆಳಗ್ಗೆ ಹಾಗೂ ಸಂಜೆ ಎರಡು ಪೀಸ್ ಬ್ರೆಡ್ಅನ್ನು ಆಹಾರವನ್ನಾಗಿ ನೀಡಲಾಗುತ್ತಿತ್ತು.
ಕೆಲ ತಿಂಗಳುಗಳ ಬಳಿಕ ಅಲ್ಲಿನ ಅಧಿಕಾರಿಗಳು ತನ್ನನ್ನು ನನ್ನ ಕುಟುಂಬ ಸದಸ್ಯರೊಡನೆ ಫೋನಿನ ಮೂಲಕ ಮಾತನಾಡಲು ಅವಕಾಶ ಮಾಡಿಕೊಟ್ಟರು. ವಿಚಾರಣೆ ಹೆಸರಲ್ಲಿ ಪ್ರತಿ ರಾತ್ರಿ ತನ್ನನ್ನು ಮಲಗಲು ಬಿಡುತ್ತಿರಲಿಲ್ಲ. ಎರಡು ತಿಂಗಳ ಕಾಲ ಕತ್ತಲೆ ಕೋಣೆಯಲ್ಲಿ ಕಳೆದಿದ್ದ ನಾನು ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಸಿಲುಕಿ ಪ್ರಾಣವನ್ನು ಕಳೆದುಕೊಳ್ಳುತ್ತೇನೆ ಎಂದು ಭಾವಿಸಿದ್ದೆ.
ಇದಾದ ಬಳಿಕ ಭಾರತ ಮೂಲದ ಮನೋಶಾಸ್ತ್ರಜ್ಞ ತನ್ನ ಸಹಾಯಕ್ಕೆ ಧಾವಿಸಿದ್ದರು. ಅವರ ಶಿಫಾರಸ್ಸು ಮೇರೆಗೆ ನನ್ನನ್ನು ಕತ್ತಲು ಕೋಣೆಯಿಂದ ಲಾಕ್ಅಪ್ಗೆ ಸ್ಥಳಾಂತರ ಮಾಡಲಾಯಿತು. ಸುದೀರ್ಘ ವಿಚಾರಣೆಯ ಬಳಿಕ ಅವರಿಗೆ ನನ್ನ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಸಿಗದ ಕಾರಣ ಬಿಟ್ಟು ಕಳುಹಿಸಿದ್ದಾರೆ.
ನನ್ನನ್ನು ಬಂಧಿಸಿದ ಬಳಿಕ ಇಲ್ಲಿನ ರಾಜಕೀಯ ಪಕ್ಷದ ಐಟಿ ಸೆಲ್ ಒಂದು ನನ್ನ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಅಲ್ಲಿನ ಇಂಟೆಲಿಜೆನ್ಸ್ ಬ್ಯೂರೋದವರಿಗೆ ಕಳುಹಿಸಿದ್ದರು. ಭಾರತೀಯ ರಾಜತಾಂತ್ರಿಕ ಇಲಾಖೆ ಹಾಗೂ ಸರ್ಕಾರ ನನ್ನ ನೆರವಿಗೆ ಧಾವಿಸಲಿಲ್ಲ. ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ನನ್ನ ಕುಟುಂಬದ ಸಹಾಯದಿಂದ ಅಕ್ಟೋಬರ್ 4ರಂದು ಕ್ಷೇಮವಾಗಿ ಇಲ್ಲಿಗೆ ಬಂದಿದ್ದೇನೆ.
ನನ್ನನ್ನು ವಾಪಸ್ ಕರೆತರಲು ಕುಟುಂಬ 28 ಲಕ್ಷ ರೂಪಾಯಿ ಖರ್ಚು ಮಾಡಿದೆ. ವಂಚನೆಯಿಂದ ಬಹಳಷ್ಟು ಹಣ ಹೋಗಿದೆ. ನನ್ನನ್ನು ಬಿಡಿಸುವ ಹೆಸರಿನಲ್ಲಿ ಅನೇಕರು ನನ್ನ ಕುಟುಂಬದಿಂದ ಹಣ ವಸೂಲಿ ಮಾಡಿದ್ದಾರೆ. ಸೌದಿಯಲ್ಲಿರುವ ನಮ್ಮ ಭಾರತೀಯ ರಾಯಭಾರ ಕಚೇರಿ ಸಂಪೂರ್ಣವಾಗಿ ಸತ್ತಿದೆ. ನನ್ನಂತೆ ಸಾವಿರಾರು ಭಾರತೀಯರು ಅಲ್ಲಿ ಸಿಲುಕಿಕೊಂಡಿದ್ದಾರೆ. ಅವನ ಸ್ಥಿತಿ ನನಗಿಂತ ಕೆಟ್ಟದಾಗಿದೆ. ಇವರಲ್ಲಿ ಹಲವರು ತಮ್ಮದೇ ಏಜೆಂಟರಿಂದಲೇ ಮೋಸ ಹೋಗಿದ್ದಾರೆ. ಅವರನ್ನು ಹೊರತರಲು ರಾಯಭಾರಿ ಕಚೇರಿಯ ಜನರು ಹಣಕ್ಕೆ ಬೇಡಿಕೆ ಇಡುತ್ತಾರೆ. ಪಾವತಿಸಲು ಸಾಧ್ಯವಿರುವವರ ಹಣವನ್ನು ಸಾಕಷ್ಟು ಹಣವನ್ನು ಪೀಕುತ್ತಾರೆ ಎಂದು ನೋವನ್ನು ತೋಡಿಕೊಂಡಿದ್ದಾರೆ.
ಕಳೆದ ವರ್ಷ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕನ್ಯಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆ ಅರಂಭಿಸಿದ್ದರು. ಈ ವೇಳೆ ಅವರನ್ನು ಬೆಂಬಲಿಸುವ ಸಲುವಾಗಿ ರಾಜಾ ಖಾದ್ರಿ ಭಾರತ್ ಜೋಡೋ ಯಾತ್ರೆಯ ಫಲಕವನ್ನು ಕಾಭಾದಲ್ಲಿ ತೋರಿಸಿ ಫೋಟೋವನ್ನು ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ.
ಇದಾದ ಎರಡು ದಿನಗಳ ಬಳಿಕ ಆತ ತಂಗಿದ್ದ ಹೋಟೆಲ್ ನಲ್ಲಿ ಅವರನ್ನು ಸೌದಿ ಪೊಲೀಸರು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದರು.ಇಸ್ಲಾಮಿಕ್ ಪವಿತ್ರ ಸ್ಥಳಗಳು ಸೇರಿದಂತೆ ಸೌದಿ ಅರೇಬಿಯಾದಲ್ಲಿ ಯಾವುದೇ ರೀತಿಯ ಧ್ವಜ ಮತ್ತು ಫಲಕವನ್ನು ಪ್ರದರ್ಶಿಸುವುದು ಕಾನೂನು ಬಾಹಿರವಾಗಿದ್ದರಿಂದ ಅವರನ್ನು ಬಂಧಿಸಿ ಜೈಲಿಗೆ ಅಟ್ಟಿದ್ದರು.