ಮಂಗಳೂರು: ನೇತ್ರಾವತಿ ಸೇತುವೆಯಲ್ಲಿ ಐದಾರು ವಾಹನಗಳ ನಡುವೆ ಸರಣಿ ಅಪಘಾತ - ಸಂಚಾರ ವ್ಯತ್ಯಯ
Monday, October 16, 2023
ಉಳ್ಳಾಲ: ಸಂಜೆ ವೇಳೆ ಜಿಟಿಜಿಟಿ ಸುರಿಯುತ್ತಿರುವ ಮಳೆಗೆ ನಗರದ ನೇತ್ರಾವತಿ ಸೇತುವೆಯಲ್ಲಿ ಲಾರಿ, ಮೂರು ಕಾರುಗಳು, ಪಿಕ್ ಅಪ್ ಹಾಗೂ ಸಿಟಿ ಬಸ್ ನಡುವೆ ಸರಣಿ ಅಪಘಾತ ನಡೆದಿದೆ. ಪರಿಣಾಮ ಸಂಚಾರದಲ್ಲಿ ವ್ಯತ್ಯಯವಾಗಿ ರಸ್ತೆಯುದ್ದಕ್ಕೂ ವಾಹನಗಳು ಸರತಿ ಸಾಲಿನಲ್ಲಿ ನಿಂತಿರುವುದು ಕಂಡು ಬಂದಿದೆ.
ಮಳೆಗೆ ನೇತ್ರಾವತಿ ಸೇತುವೆಯಲ್ಲಿ ನಿಂತಿದ್ದ ಲಾರಿಗೆ ಹಿಂಭಾಗದಿಂದ ಬರುತ್ತಿದ್ದ ಕಾರೊಂದು ಡಿಕ್ಕಿ ಹೊಡೆದಿದೆ. ಆದರೆ ಕ್ಷಣ ಮಾತ್ರದಲ್ಲಿ ಅದರ ಹಿಂದಿನ ಮೂರು ಕಾರು, ಪಿಕ್ ಅಪ್ ವಾಹನ, ಸಿಟಿ ಬಸ್ಸುಗಳು ಒಂದಕ್ಕೊಂದು ಡಿಕ್ಕಿಯಾಗಿ ಸರಣಿ ಅಪಘಾತ ಸಂಭವಿಸಿದೆ. ಈ ಘಟನೆಯಿಂದ ವಾಹನ ಸವಾರರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಸರಣಿ ಅಪಘಾತದಿಂದ ಹೆದ್ದಾರಿ ಉದ್ದಕ್ಕೂ ಸಂಚಾರದಲ್ಲಿ ವ್ಯತ್ಯಯ ಆಗಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಹೆಚ್ಚಿನ ಪೊಲೀಸರು ಮೈಸೂರು ದಸರಾ ಬಂದೋಬಸ್ತಿಗೆ ತೆರಳಿದ್ದಾರೆ. ಪರಿಣಾಮ ಟ್ರಾಫಿಕ್ ಸಮಸ್ಯೆಗೀಡಾದ ವಾಹನ ಸವಾರರು ಕಿರಿ ಕಿರಿ ಅನುಭವಿಸಿದ್ದಾರೆ.