ಖಾಲಿಮನೆಗಳ ಬಗ್ಗೆ ಮಾಹಿತಿ ನೀಡಿ ಕಳ್ಳರಿಂದ ಕಳವು ಮಾಡಿಸುತ್ತಿದ್ದ ಪೊಲೀಸ್ ಕಾನ್ ಸ್ಟೇಬಲ್ ಅರೆಸ್ಟ್ - ಕಳವಿನಲ್ಲಿ ಈತನಿಗೂ ಇದೆ ಪಾಲು
Tuesday, October 17, 2023
ಬೆಂಗಳೂರು: ಖಾಲಿ ಮನೆಗಳನ್ನೇ ಗುರುತಿಸಿ ಕಳ್ಳರಿಗೆ ಮಾಹಿತಿ ಕೊಡುತ್ತಿದ್ದ ಪೊಲೀಸ್ ಸಿಬ್ಬಂದಿಯೇ ಮನೆಗಳವು ಮಾಡಿಸುತ್ತಿದ್ದ ಆರೋಪಿಯನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ.
ದೇವನಹಳ್ಳಿ ಠಾಣೆಯ ಪೊಲೀಸ್ ಕಾನ್ ಸ್ಟೇಬಲ್ ಯಲ್ಲಪ್ಪ ಬಂಧನಕ್ಕೀಡಾದ ಆರೋಪಿ.
ಯಲ್ಲಪ್ಪ ಕುಖ್ಯಾತ ಆರೋಪಿಗಳಿಂದ ಈತ ಮನೆಗಳವು ಮಾಡಿಸುತ್ತಿದ್ದ. ಚಂದ್ರಾಲೇಔಟ್, ಚಿಕ್ಕಜಾಲ, ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮೂರು ಮನೆಗಳ್ಳತನ ಪ್ರಕರಣಗಳಲ್ಲಿ ಪೇದೆ ಯಲ್ಲಪ್ಪ ಕೈವಾಡ ಇರುವುದು ಪತ್ತೆಯಾಗಿತ್ತು. ಖಾಲಿ ಮನೆಗಳು, ಒಂಟಿಯಾಗಿ ವಾಸವಿರುವ ವ್ಯಕ್ತಿಗಳ ಬಗ್ಗೆ ಕಳ್ಳರಿಗೆ ಮಾಹಿತಿ ನೀಡಿ ಅವರಿಂದಲೇ ಕಳವು ಕೃತ್ಯ ಮಾಡಿಸುತ್ತಿದ್ದ ಪೊಲೀಸ್ ಕಾನ್ಸ್ ಟೇಬಲ್ ಕಳವುಗೈದ ಸೊತ್ತಿನಲ್ಲಿ ಪಾಲು ತೆಗೆದುಕೊಳ್ಳುತ್ತಿದ್ದ.
ಇತ್ತೀಚೆಗಷ್ಟೇ ದೇವನಹಳ್ಳಿ ಠಾಣೆಗೆ ವರ್ಗಾವಣೆಗೊಂಡಿದ್ದ ಕಾನ್ಸ್‌ಟೇಬಲ್ ಯಲ್ಲಪ್ಪನ ಬಗ್ಗೆ ಪೊಲೀಸ್ ತನಿಖೆಯಲ್ಲಿ ಶಂಕೆ ಕಂಡುಬಂದಿತ್ತು. ಕಳವು ಪ್ರಕರಣದ ಆರೋಪಿಗಳ ತನಿಖೆಯ ವೇಳೆ ಯಲ್ಲಪ್ಪನ ಜೊತೆಗೆ ಸಂಪರ್ಕ ಇರುವುದು ತಿಳಿದ ಜ್ಞಾನಭಾರತಿ ಪೊಲೀಸರು ಪೊಲೀಸ್ ಕಾನ್ ಸ್ಟೇಬಲ್ ನನ್ನು ಬಂಧಿಸಿದ್ದಾರೆ.