ಬಡ ಹೆತ್ತವರಿಂದ ಶಿಶುವನ್ನು ಖರೀದಿಸಿ ಮಾರಾಟ ಮಾಡುತ್ತಿದ್ದ ಸರಕಾರಿ ಆಸ್ಪತ್ರೆಯ ವೈದ್ಯೆ ಅರೆಸ್ಟ್
Wednesday, October 18, 2023
ಚೆನ್ನೈ: ಸಾಕಲು ಶಕ್ತರಲ್ಲದ ಬಡ ದಂಪತಿಯಲ್ಲಿ ಮಕ್ಕಳನ್ನು ಖರೀದಿಸಿ ಮಾರಾಟ ಮಾಡುತ್ತಿದ್ದ ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯ ವೈದ್ಯೆಯನ್ನು ಪೊಲೀಸರು ಬಂಧಿಸಿದ್ದಾರೆ.
ಡಾ.ಅನುರಾಧ(49) ಬಂಧಿತ ವೈದ್ಯೆ.
ಡಾ.ಅನುರಾಧ ನಾಮಕಲ್ನ ತಿರುಚೆಂಗೋಡ್ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಯಾಗಿದ್ದಳು. ಈಕೆಯೊಂದಿಗೆ ಸಹಾಯಕಿ ಲೋಕಾಂಬಾಲ್ ಎಂಬಾಕೆಯನ್ನು ಬಂಧಿಸಲಾಗಿದೆ.
ಅನುರಾಧಾ, ಚಿಕಿತ್ಸೆಗೆಂದು ಆಸ್ಪತ್ರೆಗೆ ಬರುತ್ತಿದ್ದ ಬಡವರನ್ನೇ ಟಾರ್ಗೆಟ್ ಮಾಡುತ್ತಿದ್ದಳು. ಇಬ್ಬರು ಮಕ್ಕಳಿರುವ ತಾಯಿಯ ಬಳಿ ತನ್ನ ಸಹಾಯಕಿ ಲೋಕಾಂಬಾಲ್ಳನ್ನು ವೈದ್ಯೆ ಕಳುಹಿಸುತ್ತಿದ್ದಳು. ಬಡತನದ ಬೇಗೆಯಲ್ಲಿ ಬೇಯುತ್ತಿದ್ದ ತಾಯಂದಿರು ದುಡ್ಡಿಗಾಗಿ ಮಕ್ಕಳನ್ನು ಮಾರುತ್ತಿದ್ದರು. ಮಕ್ಕಳನ್ನು ಖರೀದಿಸುತ್ತಿದ್ದ ವೈದ್ಯೆ, ಸ್ವಲ್ಪ ಸಮಯದ ಬಳಿಕ ಮಕ್ಕಳನ್ನು ಹಣವಂತರಿಗೆ ಮತ್ತು ಅಗತ್ಯವಿರುವವರಿಗೆ ಮಾರಾಟ ಮಾಡುತ್ತಿದ್ದಳು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಈವರೆಗೂ 7 ಮಕ್ಕಳನ್ನು ಮಾರಾಟ ಮಾಡಿರುವುದಾಗಿ ಆರೋಪಿತೆ ವೈದ್ಯೆ ಅನುರಾಧಾ ತಪ್ಪೊಪ್ಪಿಕೊಂಡಿದ್ದಾಳೆ.
ತಮ್ಮ ನವಜಾತ ಶಿಶುವಿನ ಅನಾರೋಗ್ಯದ ಹಿನ್ನಲೆಯಲ್ಲಿ ಅ.12ರಂದು ದಿನೇಶ್ ಮತ್ತು ನಾಗಜ್ಯೋತಿ ದಂಪತಿ ಆಸ್ಪತ್ರೆಗೆ ಬಂದಿದ್ದರು. ಈ ಸಂದರ್ಭದಲ್ಲಿ ಲೋಕಾಂಬಾಲ್ಬಳಿ ಮಗು ಮಾರಾಟದ ಕುರಿತು ಮಾತನಾಡಿದ್ದಾಳೆ. ಇದರಿಂದ ಅನುಮಾನಗೊಂಡ ದಂಪತಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ. ಈ ಪೊಲೀಸರು ವೈದ್ಯೆ ಅನುರಾಧ ಮತ್ತು ಲೋಕಾಂಬಾಲ್ ಇಬ್ಬರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದಾಗ ಇಬ್ಬರು ತಪ್ಪೊಪ್ಪಿಕೊಂಡಿದ್ದಾರೆ.
ಆರೋಪಿಗಳಿಬ್ಬರು ಅಂಗಾಂಗ ಕಳ್ಳಸಾಗಾಣೆಯಲ್ಲೂ ತೊಡಗಿರುವ ಸುಳಿವು ಸಹ ಸಿಕ್ಕಿದೆ. ಇಬ್ಬರು ಜಾಲ ಬೇರೆ ಆಸ್ಪತ್ರೆಗೂ ಹಬ್ಬಿದ್ದು, ತಿರುಚಿರಪಲ್ಲಿ ಮತ್ತು ತಿರುನಲ್ವೇಲಿ ಸರ್ಕಾರಿ ಆಸ್ಪತ್ರೆಯ ಕೆಲ ಸಿಬ್ಬಂದಿಯೂ ಸಹ ಆರೋಪಿಗಳಿಗೆ ಸಹಾಯ ಮಾಡಿರುವ ಶಂಕೆ ವ್ಯಕ್ತವಾಗಿದೆ. ತಮಿಳುನಾಡಿನ ಆರೋಗ್ಯ ಸಚಿವರು ಅನುರಾಧಾಳನ್ನು ತಕ್ಷಣ ಕೆಲಸದಿಂದಲೇ ವಜಾಗೊಳಿಸಿದ್ದಾರೆ. ಅಲ್ಲದೆ. ಇಡೀ ಪ್ರಕರಣದ ತನಿಖೆಗೆಂದು ವಿಶೇಷ ತನಿಖಾ ತಂಡವೊಂದನ್ನು ನೇಮಿಸಿದ್ದಾರೆ.
ಕೆಲವು ವರ್ಷಗಳ ಹಿಂದೆ ಸೇಲಂ ಮತ್ತು ಈರೋಡ್ ಜಿಲ್ಲೆಗಳಲ್ಲಿ ನವಜಾತ ಶಿಶುಗಳನ್ನು ಮಾರಾಟ ಮಾಡುತ್ತಿದ್ದ ಕೆಲವರನ್ನು ಬಂಧಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ಇನ್ನೂ ನ್ಯಾಯಾಲಯದಲ್ಲಿ ನಡೆಯುತ್ತಿರುವಾಗಲೇ ಶಿಶುಗಳನ್ನು ಮಾರಾಟ ಮಾಡುತ್ತಿದ್ದ ಮತ್ತೊಬ್ಬ ಮಹಿಳಾ ವೈದ್ಯೆಯನ್ನು ಬಂಧಿಸಲಾಗಿದೆ.