ಮಂಗಳೂರು: ಫುಟ್ ಪಾತ್ ನಲ್ಲಿ ಹೋಗುತ್ತಿದ್ದ ಹುಡುಗಿಯರ ಮೇಲೆರಗಿದ ಕಾರು, ಯುವತಿ ಸಾವು - ಅಪಘಾತದ ಭೀಕರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ
Wednesday, October 18, 2023
ಮಂಗಳೂರು: ದಸರಾ ಹಿನ್ನೆಲೆಯಲ್ಲಿ ಕುದ್ರೋಳಿ ದೇವಸ್ಥಾನಕ್ಕೆ ಆಗಮಿಸಿ ಮರಳಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಹುಡುಗಿಯರ ಗುಂಪಿನ ಮೇಲೆರಗಿ ಕಾರು ಹರಿದ ಪರಿಣಾಮ ಯುವತಿಯೊಬ್ಬಳು ದಾರುಣವಾಗಿ ಮೃತಪಟ್ಟ ಘಟನೆ ನಗರದ ಮಣ್ಣಗುಡ್ಡದಲ್ಲಿ ಬುಧವಾರ ಸಂಜೆ 5.30ರ ವೇಳೆಗೆ ನಡೆದಿದೆ.
ಸುರತ್ಕಲ್ ಕಾನ ಬಾಳ ನಿವಾಸಿ ರೂಪಶ್ರೀ (23) ಮೃತಪಟ್ಟ ಯುವತಿ. ಸ್ವಾತಿ(26), ಹಿತ್ನವಿ (16), ಕೃತಿಕಾ (16), ಯತಿಕಾ(12) ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ನಾಲ್ವರು ಹುಡುಗಿಯರು ಜೊತೆಯಾಗಿ ಕುದ್ರೋಳಿ ದೇವಸ್ಥಾನಕ್ಕೆ ಬಂದಿದ್ದರು. ದೇವರ ದರ್ಶನ ಮಾಡಿ ಮರಳಿ ಮನೆಗೆ ಹೋಗಲು ಲೇಡಿಹಿಲ್ ವರೆಗೆ ನಡೆದುಕೊಂಡು ಹೋಗುತ್ತಿದ್ದರು. ಅವರು ಮಣ್ಣಗುಡ್ಡಕ್ಕೆ ಬರುತ್ತಿದ್ದಂತೆ ಹಿಂಬದಿಯಿಂದ ನುಗ್ಗಿ ಬಂದ ಕಾರೊಂದು ಫುಟ್ ಪಾತ್ ನಲ್ಲಿ ನಡೆದು ಹೋಗುತ್ತಿದ್ದ ಎಲ್ಲಾ ಹುಡುಗಿಯರನ್ನು ಗುಂಪಿನ ಮೇಲೆಯೇ ಎರಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರೂಪಶ್ರೀಯನ್ನು ತಕ್ಷಣ ಸ್ಥಳೀಯರು ಎ.ಜೆ.ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟರಲ್ಲಿ ಮೃತಪಟ್ಟಿದ್ದಾಳೆ. ಆದರೆ ಇತರ ನಾಲ್ವರೂ ಗಾಯಗೊಂಡಿದ್ದು ಅಪಾಯದಿಂದ ಪಾರಾಗಿದ್ದಾರೆ.
ಕಾರು ಸಂಪೂರ್ಣ ಚಾಲಕನ ನಿಯಂತ್ರಣ ತಪ್ಪಿ ಹುಡುಗಿಯರ ಮೇಲೆ ಹರಿದಿದೆ. ಅಪಘಾತದ ಭೀಕರ ದೃಶ್ಯ ಸ್ಥಳೀಯ ಕಟ್ಟಡದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾರು ನಾಲ್ಕು ಹುಡುಗಿಯರಿಗೆ ಡಿಕ್ಕಿಯಾದ ಬಳಿಕ ರಸ್ತೆ ದಾಟುತ್ತಿದ್ದ ಇನ್ನೊಬ್ಬ ಮಹಿಳೆಗೂ ಡಿಕ್ಕಿಯಾಗಿದೆ. ಘಟನೆಯಿಂದ ಆಕೆಯೂ ಗಾಯಗೊಂಡಿದ್ದಾರೆ.
ಕಾರು ಚಾಲಕ ಕಮಲೇಶ್ ಬಲದೇವ್ ಎಂಬಾತ ಅಪಘಾತದ ಬಳಿಕ ಕಾರನ್ನು ನಿಲ್ಲಿಸದೆ, ಮಣ್ಣಗುಡ್ಡದ ತನ್ನ ಮನೆಗೆ ಪರಾರಿಯಾಗಿದ್ದಾನೆ. ಮನೆಗೆ ಹೋಗಿ ತಂದೆಯೊಂದಿಗೆ ಪಾಂಡೇಶ್ವರ ಠಾಣೆಗೆ ಆಗಮಿಸಿದ್ದಾನೆ. ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಾಂಡೇಶ್ವರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.