ದಾರಿ ತಪ್ಪಿಸಿದ ಜಿಪಿಎಸ್ : ಯುವ ವೈದ್ಯರಿಬ್ಬರು ಬಲಿ
Monday, October 2, 2023
ಕೊಚ್ಚಿನ್: ಕಗ್ಗತ್ತಲು ಹಾಗೂ ಜೋರಾದ ಮಳೆಯಲ್ಲಿ ವಾಹನ ಚಲಾಯಿಸಲು ಜಿಪಿಎಸ್ ಸೂಚನೆಯನ್ನು ಅನುಸರಿಸಲು ಹೋಗಿ ಇಬ್ಬರು ವೈದ್ಯರು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋದ ಘಟನೆ ಭಾನುವಾರ ಮಧ್ಯರಾತ್ರಿ 12.30ರ ಸುಮಾರಿಗೆ ಕೇರಳದ ಎರ್ನಾಕುಲಂ ಜಿಲ್ಲೆಯ ಗೊರುರುತ್ ಎಂಬಲ್ಲಿ ನಡೆದಿದೆ.
ಹೋಂಡಾ ಸಿವಿಕ್ ಕಾರು ಚಲಾಯಿಸುತ್ತಿದ್ದ ಡಾ.ಅದೈತ್ ಸುರಿಯುತ್ತಿದ್ದ ಮಳೆಯಲ್ಲಿ ಗೊತ್ತಿಲ್ಲದ ರಸ್ತೆಯಲ್ಲಿ ಮಾರ್ಗದರ್ಶನಕ್ಕೆ ಜಿಪಿಎಸ್ ಮೊರೆ ಹೋಗಿದ್ದರು. ನೀರು ಏರಿರುವ ಸ್ಥಳವನ್ನು ತಲುಪಿದಾಗ ಜಿಪಿಎಸ್ ಮಾರ್ಗನಕ್ಷೆ ನೇರ ಮಾರ್ಗವಿದೆ ಎಂಬ ಸೂಚನೆ ನೀಡಿದೆ. ಕಾರು ಮುಂದೆ ಹೋಗುತ್ತಿದ್ದಂತೆ ತುಂಬಿ ಹರಿಯುತ್ತಿದ್ದ ಹೊಳೆಯಲ್ಲಿ ಕಾರು ಮುಳುಗಿದೆ. ಕಾರಿನಲ್ಲಿದ್ದ ಡಾ.ಅದೈತ್ ಹಾಗೂ ಡಾ.ಅಜ್ಮಲ್ ಆಸೀಫ್ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಇದೇ ಕಾರಿನಲ್ಲಿದ್ದ ಇತರ ಮೂವರು ಕಾರಿನಿಂದ ಹೊರಕ್ಕೆ ಬರುವಲ್ಲಿ ಯಶಸ್ವಿಯಾಗಿದ್ದು, ಅವರನ್ನು ರಕ್ಷಿಸಲಾಗಿದೆ.
29ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಡಾ.ಅದೈತ್ ಹುಟ್ಟುಹಬ್ಬಕ್ಕಾಗಿ ಕೊಚ್ಚಿನ್ ಗೆ ತೆರಳಿ, ಅಲ್ಲಿಂದ ಕೊಡುಂಗಲ್ಲೂರಿಗೆ ವಾಪಸ್ಸಾಗುತ್ತಿದ್ದರು ಎನ್ನಲಾಗಿದೆ. ಜಿಪಿಎಸ್ ನಕ್ಷೆಯಲ್ಲಿ ಮಾರ್ಗವನ್ನು ಬದಲಿಸಲು ಸೂಚನೆ ಬಂದ ಹಿನ್ನೆಲೆಯಲ್ಲಿ ಅದಕ್ಕೆ ಅನುಗುಣವಾಗಿ ಮುಂದುವರಿದಿದ್ದೇ ಈ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಡಾ.ಅದೈತ್ ಹುಟ್ಟುಹಬ್ಬದ ಅಂಗವಾಗಿ ವೈದ್ಯರು ಪುರುಷ ನರ್ಸ್ ರೊಂದಿಗೆ ಪಾರ್ಟಿಗೆ ತೆರಳಿದ್ದರು. ಡಾ.ಅಜ್ಮಲ್ ಅವರ ಭಾವಿ ಪತ್ನಿ ಕೂಡಾ ಜತೆಗಿದ್ದರು ಎಂದು ರವಿ ವಿವರಿಸಿದ್ದಾರೆ.