ಮಹಿಳೆಯ ಮೃತದೇಹದ ಕೈಯಲ್ಲಿದ್ದ ಬಳೆಗಳನ್ನು ಬಿಡದ ಕಳ್ಳರು: ಆಸ್ಪತ್ರೆ ತುರ್ತು ತುರ್ತು ಘಟಕ ಸಿಬ್ಬಂದಿಯ ಮೇಲೆ ಅನುಮಾನ?
Monday, October 30, 2023
ಮೂಡಿಗೆರೆ: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟ ಮಹಿಳೆಯ ಕೈಗಳಲ್ಲಿದ್ದ ಎರಡು ಚಿನ್ನದ ಬಳೆಗಳು ನಾಪತ್ತೆಯಾಗಿದ್ದು, ಆಸ್ಪತ್ರೆ ತುರ್ತು ಘಟಕ ಸಿಬ್ಬಂದಿಯೇ ಕಳವುಗೈದಿರಬಹುದು ಎಂದು ಮೃತ ಮಹಿಳೆಯ ಕುಟುಂಬಸ್ಥರು ಆರೋಪಿಸಿ ದೂರು ದಾಖಲಿಸಿದ್ದಾರೆ.
ಬೆಂಗಳೂರಿನ ಲಕ್ಷ್ಮೀದೇವಿ ಎಂಬವರು ಅ.23ರಂದು ಕುಟುಂಬ ಸಹಿತ ತಳವಾರದ ಸ್ನೇಹಿತರೊಬ್ಬರ ಮನೆಯ ಶುಭ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದರು. ಆದರೆ ಮರುದಿನ ಬೆಳಗ್ಗೆ 6.30ಕ್ಕೆ ಲಕ್ಷ್ಮೀದೇವಿಗೆ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಕುಟುಂಬಸ್ಥರು ಕರೆತಂದು ಮೂಡಿಗೆರೆ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು.
ಆಸ್ಪತ್ರೆ ತುರ್ತು ಚಿಕಿತ್ಸಾ ವಿಭಾಗಕ್ಕೆ ಕರೆದೊಯ್ದು ತಪಾಸಣೆ ನಡೆಸಿದ ವೈದ್ಯರು, ಮಹಿಳೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಕೆಲ ಹೊತ್ತಿನ ಬಳಿಕ ಮೃತದೇಹವನ್ನು ತುರ್ತು ಚಿಕಿತ್ಸಾ ವಿಭಾಗದ ಕೋಣೆಯಿಂದ ಹೊರಗೆ ತಂದಿದ್ದಾರೆ. ಈ ವೇಳೆ ಅವರ ಕೈಗಳಲ್ಲಿದ್ದ ಎರಡು ಚಿನ್ನದ ಬಳೆಗಳು ನಾಪತ್ತೆಯಾಗಿರುವುದು ಕಂಡುಬಂದಿದೆ. ಈ ಬಗ್ಗೆ ಲಕ್ಷ್ಮೀದೇವಿ ಅವರ ಸೊಸೆ ಅನಿತಾ ಆಸ್ಪತ್ರೆ ಸಿಬ್ಬಂದಿಯಲ್ಲಿ ವಿಚಾರಿಸಿದಾಗ ನಮಗೆ ಗೊತ್ತಿಲ್ಲವೆಂದು ಹೇಳಿದ್ದಾರೆ.
ಲಕ್ಷ್ಮೀದೇವಿ ಅವರನ್ನು ಆಸ್ಪತ್ರೆಗೆ ದಾಖಲಿಸಿದಾಗ ಎರಡೂ ಕೈಗಳಲ್ಲಿ ತಲಾ 2 ಚಿನ್ನದ ಬಳೆಗಳಂತೆ ಒಟ್ಟು ನಾಲ್ಕು ಬಳೆಗಳಿರುವುದನ್ನು ಗಮನಿಸಿದ್ದಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದವರು ಹೇಳಿದ್ದಾರೆ. ಕೆಲವೇ ಗಂಟೆಗಳು ಆಸ್ಪತ್ರೆಯಲ್ಲಿದ್ದ ಲಕ್ಷ್ಮೀದೇವಿ ಅವರ ಚಿನ್ನದ ಬಳೆ ಎಲ್ಲಿ ಹೋಗಲು ಸಾಧ್ಯ? ಎರಡು ಚಿನ್ನದ ಬಳೆಗಳನ್ನು ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಸಿಬ್ಬಂದಿ ತೆಗೆದುಕೊಂಡಿರುವುದಾಗಿ ಸೊಸೆ ಅನಿತಾ ಸಂಶಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮೂಡಿಗೆರೆ ಪೋಲಿಸ್ ಠಾಣೆಗೆ ಲಕ್ಷ್ಮೀದೇವಿ ಪುತ್ರ ಶೇಖರ್ ದೂರು ನೀಡಿದ್ದಾರೆ.