ದೇವರ ದರ್ಶನಕ್ಕೆ ಹೊರಟ ಕುಟುಂಬ : ಮಾರ್ಗಮಧ್ಯೆ ತಂದೆ - ಪುತ್ರಿ ದಾರುಣ ಸಾವು
Sunday, October 22, 2023
ತೆಲಂಗಾಣ: ಮಕ್ಕಳೊಂದಿಗೆ ಸಂತೋಷದಿಂದ ದೇವರ ದರ್ಶನಕ್ಕೆ ಹೊರಟಿದ್ದ ಸಂಸಾರದ ತಂದೆ ಹಾಗೂ ಪುತ್ರಿ ನಿಜಾಮಾಬಾದ್ನಲ್ಲಿ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ.
ಎನ್.ಟಿ.ಆರ್ ಜಿಲ್ಲೆಯ ಕಂಚಿಕಚಾರ್ಲ ಮಂಡಲದ ಗಣಿ ಅತ್ಕೂರಿನ ರಾಮಚಂದ್ರರಾವ್ ಹಾಗೂ ಸುನೀತಾ ಹೈದರಾಬಾದ್‌ನ ಮಿಯಾಪುರದಲ್ಲಿ ನೆಲೆಸಿದ್ದಾರೆ. ಇಬ್ಬರು ಪುತ್ರಿಯರಿರುವ ರಾಮಚಂದ್ರರಾವ್ ಖಾಸಗಿ ಕಂಪೆನಿಯ ಉದ್ಯೋಗಿಯಾಗಿದ್ದಾರೆ. ಇವರು ಕುಟುಂಬ ಸಹಿತರಾಗಿ ನಿಜಾಮಾಬಾದ್‌ನಲ್ಲಿರುವ ಸರಸ್ವತಿ ದೇವಿಯ ಪೂಜೆಗೆ ರೈಲಿನಲ್ಲಿ ಹೊರಟಿದ್ದರು. ರೈಲಿನಲ್ಲಿ ಆಸನವಿಲ್ಲದ ಕಾರಣ ದಂಪತಿ ಒಂದು ಬೋಗಿಯಲ್ಲಿ ಮತ್ತು ಹೆಣ್ಣು ಮಕ್ಕಳು ಮತ್ತೊಂದು ಬೋಗಿಯಲ್ಲಿ ಹತ್ತಿದರು. ಅಲ್ಲಿಯವರೆಗೆ ಎಲ್ಲವೂ ಸರಿಯಾಗಿತ್ತು. ಮತ್ತೊಂದು ನಿಲ್ದಾಣದಲ್ಲಿ, ಅದೇ ಗಾಡಿಯಲ್ಲಿ ಬದಲಾಯಿಸಲು ರೈಲಿನಿಂದ ಇಳಿದರು. ಇನ್ನೊಂದು ಬೋಗಿಯಲ್ಲಿ ಹತ್ತುವಾಗ, ರೈಲು ಮುಂದೆ ಸಾಗುತ್ತಿದ್ದಂತೆ ಪುತ್ರಿ ಹಿಡಿತ ತಪ್ಪಿ ರೈಲಿನಿಂದ ಕೆಳಗೆ ಬಿದ್ದಿದ್ದಾಳೆ.
ಪುತ್ರಿಯನ್ನು ರಕ್ಷಿಸಲು ಯತ್ನಿಸಿದ ತಂದೆ ಕೂಡ ರೈಲು ಹಳಿಯ ನಡುವೆ ಸಿಲುಕಿಕೊಂಡಿದ್ದು, ಈ ಅಪಘಾತದಲ್ಲಿ ಪುತ್ರಿ ಜನನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಗಂಭೀರವಾಗಿ ಗಾಯಗೊಂಡಿದ್ದ ರಾಮಚಂದ್ರರಾವ್ ರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಅವರು ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಪತ್ನಿಯ ಕಣ್ಣೆದುರೇ ಪತಿ-ಪುತ್ರಿ ಸಾವನ್ನಪ್ಪಿದ್ದಾರೆ.