ನಾಯಿಯನ್ನು ಗೇಟ್ ಗೆ ನೇತುಹಾಕಿ ಕೊಲೆಗೈದ ಶ್ವಾನ ತರಬೇತುದಾರರು: ಮೂವರು ಅರೆಸ್ಟ್
Friday, October 20, 2023
ಮುಂಬೈ: ಸಾಕುನಾಯಿಗಳಿಗೆ ತರಬೇತಿ ನೀಡುವ ಶ್ವಾನ ತರಬೇತುದಾರರು ನಾಯಿಯನ್ನು ಬರ್ಬರವಾಗಿ ಕೊಂದಿರುವ ಘಟನೆ ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ ನಡೆದಿದೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಧ್ಯಪ್ರದೇಶದ ಭೋಪಾಲ್‌ನ ಶಹಜಾಪುರದ ಉದ್ಯಮಿ ನಿಖಿಲ್ ಜೈಸ್ವಾಲ್ ಎರಡು ವರ್ಷಗಳ ಹಿಂದೆ ಪಾಕಿಸ್ತಾನಿ ಬುಲ್ಲಿ ನಾಯಿಯನ್ನು ಖರೀದಿಸಿದ್ದಾರೆ. 2023ರ ಮೇಯಲ್ಲಿ ಈ ಶ್ವಾನಕ್ಕೆ ತರಬೇತಿ ನೀಡಲೆಂದು ಭೋಪಾಲ್‌ನ ಆಲ್ಫಾ ಡಾಗ್ ಟ್ರೈನಿಂಗ್ ಮತ್ತು ಬೋರ್ಡಿಂಗ್ ಸೆಂಟರ್‌ನಲ್ಲಿ ನಾಯಿಯನ್ನು ಬಿಟ್ಟಿದ್ದರು. ನಾಲ್ಕು ತಿಂಗಳ ತರಬೇತಿಗೆ ತಿಂಗಳಿಗೆ 13 ಸಾವಿರ ರೂ.ನಂತೆ ಶುಲ್ಕವನ್ನೂ ಪಾವತಿಸಿದ್ದಾರೆ.
ನಾಯಿಯ ಮಾಲಕ ನಿಖಿಲ್ ಜೈಸ್ವಾಲ್ ಅವರು, ಅಕ್ಟೋಬರ್ 9ರಂದು ತರಬೇತಿ ಕೇಂದ್ರದ ತರಬೇತುದಾರ ರವಿ ಕುಶ್ವಾಹಗೆ ಕರೆ ಮಾಡಿ ಶ್ವಾನದ ತರಬೇತಿ ಪಡೆದಿರುವ ಬಗ್ಗೆ ವಿಚಾರಿಸಿದ್ದಾರೆ. ಆತ ನಿಮ್ಮ ನಾಯಿ ಅನಾರೋಗ್ಯದಿಂದ ಸಾವನ್ನಪ್ಪಿದೆ ಎಂದು ತಿಳಿಸಿದ್ದಾರೆ. ನಾಯಿಯ ಮಾಲಕ ನಿಖಿಲ್ ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ತರಬೇತಿ ಕೇಂದ್ರದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಆಗ ಅಸಲಿ ವಿಷಯ ಹೊರಬಿದ್ದಿದೆ.
ಸಿಸಿಟಿವಿ ದೃಶ್ಯಾವಳಿಯಲ್ಲಿ, ತರಬೇತುದಾರ ರವಿ ಕುಶ್ವಾಹಾ ಅವರೊಂದಿಗೆ ತಿವಾರಿ ಮತ್ತು ದಾಸ್ ಎಂಬ ಮೂವರು ವ್ಯಕ್ತಿಗಳು ನಾಯಿಯನ್ನು ಗೇಟ್‌ಗೆ ಕಟ್ಟಿದ್ದಾರೆ. ನಾಯಿ ಸುಮಾರು 10 ನಿಮಿಷಗಳ ಕಾಲ ಜೀವನ್ಮರಣ ಹೋರಾಟ ನಡೆಸಿ ಉಸಿರುಗಟ್ಟಿ ಸಾವನ್ನಪ್ಪಿದೆ.
ಶ್ವಾನ ತರಬೇತುದಾರ ರವಿ ಕುಶ್ವಾಹ ಜೊತೆಗೆ ಅಲ್ಲಿ ಕೆಲಸ ಮಾಡುತ್ತಿದ್ದ ನೇಹಾ ತಿವಾರಿ ಮತ್ತು ತರುಣ್ ದಾಸ್ ಅವರನ್ನು ಬಂಧಿಸಲಾಗಿದೆ. ಈ ವಿಡಿಯೋ ಕ್ಲಿಪ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತರಬೇತಿಯ ಭಾಗವಾಗಿ ನಾಯಿಯನ್ನು ಗೇಟ್‌ಗೆ ನೇತುಹಾಕಿದ್ದೇವೆ. ಆದರೆ ಹಗ್ಗವು ನಾಯಿಯ ಕುತ್ತಿಗೆಗೆ ಬಿಗಿಯಾಯಿತು. ಆದರೆ ಅದನ್ನು ಉಳಿಸಲು ಪಶುವೈದ್ಯರ ಸಲಹೆ ಪಡೆದರೂ ಬದುಕಲಿಲ್ಲ ಎಂದು ಪೊಲೀಸರ ಎಂದು ಆರೋಪಿಗಳು ಹೇಳಿದ್ದಾರೆ.