ಸ್ನೇಹಿತನೊಂದಿಗೆ ಸೇರಿಕೊಂಡು ಅನಿವಾಸಿ ಭಾರತೀಯ ಪತಿಯನ್ನೇ ಕೊಂದ ಬ್ರಿಟನ್ ಮೂಲದ ಸಿಖ್ ಮಹಿಳೆಗೆ ಮರಣ ದಂಡನೆ ವಿಧಿಸಿದ ನ್ಯಾಯಾಲಯ
Monday, October 9, 2023
ಲಕ್ನೋ: ಸ್ನೇಹಿತನೊಂದಿಗೆ ಸೇರಿಕೊಂಡು ಅನಿವಾಸಿ ಭಾರತೀಯ ಪತಿಯನ್ನು ಏಳು ವರ್ಷಗಳ ಹಿಂದೆ ಹತ್ಯೆ ಮಾಡಿರುವ ಆರೋಪದಲ್ಲಿ ಬ್ರಿಟನ್ ಮೂಲದ ಸಿಖ್ ಮಹಿಳೆಗೆ ಉತ್ತರ ಪ್ರದೇಶದ ಶಹಾಜಹಾನ್ಸುರ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿದೆ.
ಆಕೆಯ ಸ್ನೇಹಿತ ಹಾಗೂ ಸಹವರ್ತಿ ಗುರುಪ್ರೀತ್ ಎಂಬಾತನಿಗೆ ಜೀವಾವಧಿ ಶಿಕ್ಷೆ ಹಾಗೂ 3 ಲಕ್ಷ ರೂಪಾಯಿ ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ರಣದೀಪ್ ಕೌರ್ ಮರಣ ದಂಡನೆ ಶಿಕ್ಷೆಗೊಳಗಾದವಳು
2016ರ ಸೆಪ್ಟೆಂಬರ್ 2ರಂದು ಸುಖಜೀತ್ ಹತ್ಯೆಯಾಗಿದೆ. ಸುಖಜೀತ್ ಸಿಂಗ್ (34) ತನ್ನ ಮಕ್ಕಳಾದ ಅರ್ಜುನ್ ಮತ್ತು ಆರ್ಯನ್ ರೊಂದಿಗೆ ನಿದ್ದೆ ಮಾಡುತ್ತಿದ್ದಳು. ಈ ವೇಳೆ ರಣದೀಪ್ ಕೌರ್ ಹಾಗೂ ಗುರುಪ್ರೀತ್ ಇಬ್ಬರೂ ಸೇರಿ ಸುಖಜೀತ್ ನನ್ನು ಹತ್ಯೆ ಮಾಡಿದ್ದು ಸಾಬೀತಾಗಿದೆ ಎಂದು ಹೆಚ್ಚುವರಿ ಜಿಲ್ಲಾ ಸರ್ಕಾರಿ ಅಭಿಯೋಜಕ ಶ್ರೀಪಾಲ್ ವರ್ಮಾ ಹೇಳಿದ್ದಾರೆ. ಈ ಬಗ್ಗೆ ಸುಖಜೀತ್ - ರಣದೀಪ್ ಕೌರ್ ದಂಪತಿ ಪುತ್ರ ಅರ್ಜುನ್ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದಿದ್ದಾನೆ. ತಾಯಿ ನಮ್ಮ ತಂದೆಯ ಮುಖವನ್ನು ದಿಂಬಿನಿಂದ ಒತ್ತಿಹಿಡಿದು ಉಸಿರುಗಟ್ಟಿಸಿದ್ದಾಳೆ. ಬಳಿಕ ಗುರುಪ್ರೀತ್, ತಲೆಗೆ ಸುತ್ತಿಗೆಯಿಂದ ಹೊಡೆದು ಸಾಯಿಸಿದ್ದಾನೆ. ಗುರುಪ್ರೀತ್ ತನ್ನ ಜೇಬಿನಿಂದ ಚಾಕು ತೆಗೆದು ತನ್ನ ತಾಯಿಗೆ ಕೊಟ್ಟಿದ್ದಾನೆ, ಆಕೆ ತಂದೆಯ ಕುತ್ತಿಗೆ ಸೀಳಿದ್ದಾಳೆ ಎಂದಿದ್ದಾನೆ.
2016ರ ಆಗಸ್ಟ್ ನಲ್ಲಿ ಸುಖಜೀತ್, ಅವರ ಪತ್ನಿ, ಮಕ್ಕಳಾದ ಅರ್ಜುನ್ ಹಾಗೂ ಆರ್ಯನ್ ತಮ್ಮ ತವರಿಗೆ ಭೇಟಿ ನೀಡಿದ್ದರು. ಈ ವೇಳೆ ಪಂಜಾಬ್ ಮೂಲದ ಅನಿವಾಸಿ ಭಾರತೀಯ ಗುರುಪ್ರೀತ್ ಕೂಡಾ ಜತೆಗಿದ್ದ. ಪತಿಯ ಕುಟುಂಬದವರು ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ಶಿಕ್ಷೆಗೆ ಒಳಗಾಗಿರುವ ಕೌರ್ ಪ್ರತಿಕ್ರಿಯಿಸಿದ್ದಾರೆ. ಇದರ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ. ಪತಿ ತಮ್ಮ ಇಡೀ ಆಸ್ತಿಯನ್ನು ಮಾರಾಟ ಮಾಡಿ ಇಂಗ್ಲೆಂಡಿಗೆ ತೆರಳಲು ಮುಂದಾಗಿದ್ದರು. ಆದ್ದರಿಂದ ಕುಟುಂಬದ ಸದಸ್ಯರೇ ಹತ್ಯೆಮಾಡಿ ಈ ಪ್ರಕರಣದಲ್ಲಿ ತಪ್ಪಾಗಿ ನನ್ನನ್ನು ಸಿಲುಕಿಸಿದ್ದಾರೆ ಎಂದು ಕೌರ್ ಆಪಾದಿಸಿದ್ದಾಗಿ ಜೈಲು ಅಧಿಕಾರಿಗಳು ಹೇಳಿದ್ದಾರೆ.