ಗೋಕರ್ಣದಲ್ಲಿ ಇದೇ ಮೊದಲ ಬಾರಿಗೆ ಮುಸ್ಲಿಂ ಕುಟುಂಬದಿಂದ ಪಿತೃಕಾರ್ಯ
Saturday, October 7, 2023
ಕಾರವಾರ: ಸಾಮಾನ್ಯ ಹಿಂದೂಗಳು ಪಿತೃಕಾರ್ಯವನ್ನು ನಡೆಸುತ್ತಿರುತ್ತಾರೆ. ಆದರೆ ಪಿತೃಪಕ್ಷದ ಪರ್ವಕಾಲದಲ್ಲಿ ಮುಸ್ಲಿಂ ಕುಟುಂಬವೊಂದು ಗೋಕರ್ಣದಲ್ಲಿ ಪಿತೃಕಾರ್ಯ ನೆರವೇರಿಸಿದೆ. ಧಾರವಾಡ ಧಾನೇಶ್ವರಿ ನಗರದ ಶಂಶಾದ್ ಎಂಬುವರು ಜ್ಯೋತಿಷಿಯೊಬ್ಬರ ಸಲಹೆ ಮೇರೆಗೆ ನಾರಾಯಣ ಬಲಿ, ತ್ರಿಪಿಂಡಿ ಶ್ರಾದ್ಧ ಮತ್ತು ತಿಲಹವನವನ್ನು ಗೋಕರ್ಣದ ಪಿತೃಶಾಲೆಯಲ್ಲಿ ಪೂರೈಸಿದರು.
ಶಂಶಾದ್ ಅವರು ಈ ಬಗ್ಗೆ ಮಾತನಾಡಿ, ನಾವು ಮೊದಲಿನಿಂದಲೂ ಕುಂಡಲೀ, ಜಾತಕ, ಹಿಂದೂ ಸಂಪ್ರದಾಯದ ಮೇಲೆ ನಂಬಿಕೆ ಉಳ್ಳವರು. ನಮ್ಮ ತಂದೆ ಗದಗಿನ ವೀರನಾರಾಯಣ ದೇವಸ್ಥಾನದ ಹತ್ತಿರದ ಬ್ರಾಹ್ಮಣ ಮತ್ತು ಲಿಂಗಾಯತ ಸಮುದಾಯದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದವರು. ಅವರೊಂದಿಗೆ ಬೆಳೆದು ದೊಡ್ಡವರಾದವರು. ನನ್ನ ಸಹೋದರನಿಗೆ ಮದುವೆಗೆ ಸರಿಯಾದ ಹೆಣ್ಣು ಸಿಗದಿದ್ದಾಗ ಜ್ಯೋತಿಷಿಯ ಬಳಿ ಹೋಗಿದ್ದೆವು. ಅವರು ತಿಳಿಸಿದಂತೆ ತಮ್ಮನ ಮದುವೆ, ಮಾನಸಿಕ ಶಾಂತಿ ಹಾಗೂ ಉದ್ಯೋಗದಲ್ಲಿ ಏಳಿಗೆ ಸಿಗಲಿ ಎಂಬ ಉದ್ದೇಶದಿಂದ ಈ ಪಿತೃಕಾರ್ಯ ಮಾಡಿಸಿದ್ದೇವೆ ಎಂದು ತಿಳಿಸಿದ್ದಾರೆ.
ಜ್ಯೋತಿಷಿಗಳ ಮಾರ್ಗದರ್ಶನದಂತೆ ಗೋಕರ್ಣಕ್ಕೆ ಬಂದು ಕ್ಷೇತ್ರ ಪುರೋಹಿತ ನಾಗರಾಜ ಭಟ್ ಗುರ್ಲಿಂಗ್ ಹಾಗೂ ಸುಬ್ರಹಣ್ಯ ಚಿತ್ರಿಗೆಮಠದವರ ನೇತೃತ್ವದಲ್ಲಿ ಎಲ್ಲಾ ಪೂಜಾ ಕಾರ್ಯ ನೆರವೇರಿಸಿದ್ದಾರೆ. ಗೋಕರ್ಣದಲ್ಲಿ ಕ್ರಿಶ್ಚಿಯನ್ ಸಮುದಾಯದವರು, ವಿದೇಶಿಗರು ಇಂತಹ ಪಿತೃ ಕಾರ್ಯ ನೆರವೇರಿಸಿದ ಅನೇಕ ಉದಾಹರಣೆಗಳಿವೆ. ಆದರೆ ಮುಸ್ಲಿಂ ಕುಟುಂಬವೊಂದು ಪಿತೃಕಾರ್ಯ ನೆರವೇರಿಸಿದ್ದು, ಇದೇ ಮೊದಲು ಎಂದು ಹೇಳಲಾಗಿದೆ.