ರಾಮಲೀಲಾ ಮೈದಾನದಲ್ಲಿ ರಾವಣನ ಪ್ರತಿಕೃತಿ ದಹಿಸಿದ ಮೊದಲ ಮಹಿಳೆ ಕಂಗನಾ ರಣಾವತ್
Wednesday, October 25, 2023
ನವದೆಹಲಿ: ಇಲ್ಲಿನ ಕೆಂಪುಕೋಟೆಯ ಲವ್ - ಕುಶ್ ರಾಮಲೀಲಾ ಮೈದಾನದಲ್ಲಿ ಅದ್ದೂರಿಯಾಗಿ ನಡೆದ ವಿಜಯದಶಮಿ ಆಚರಣೆಯಲ್ಲಿ ನಟಿ ಕಂಗನಾ ರಣಾವತ್ ರಾವಣನ ಪ್ರತಿಕೃತಿಗೆ ಬೆಂಕಿ ಹಚ್ಚಲು ಯತ್ನಿಸುವ ಮೂಲಕ ನೆರೆದವರ ಗಮನಸೆಳೆದರು.
ನಟಿ ಕಂಗನಾ ರಣಾವತ್ ಕೆಂಪು ಕೋಟೆಯಲ್ಲಿ ದೆಹಲಿಯ ಪ್ರಸಿದ್ಧ ಲವ್ - ಕುಶ್ ರಾಮಲೀಲಾದಲ್ಲಿ ರಾವಣನ ಪ್ರತಿಕೃತಿಯನ್ನು ದಹಿಸಲು ಬಾಣ ಬಿಡಲು ಪ್ರತ್ನಿಸಿದ್ದಾರೆ. ಕಳೆದ 50 ವರ್ಷಗಳ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮಹಿಳೆಯೊಬ್ಬರು ಇಲ್ಲಿ ರಾವಣನ ಪ್ರತಿಕೃತಿ ದಹಿಸಲು ಯತ್ನಿಸಿದ್ದಾರೆ.
ಕಳೆದ 50 ವರ್ಷಗಳಲ್ಲಿ ರಾವಣನ ದಹನವನ್ನು ಪುರುಷರೇ ಮಾಡುತ್ತಾ ಬರುತ್ತಿದ್ದರು. ಈ ವರ್ಷ ಕಂಗನಾ ಅವರಿಗೆ ಅವಕಾಶ ನೀಡಲಾಯಿತು. ಆದರೆ, ಅವರಿಂದ ಇದು ಸಾಧ್ಯವಾಗಿಲ್ಲ. ಅವರು ಮೂರು ಬಾರಿ ಪ್ರಯತ್ನಿಸಿದರೂ ಬಾಣ ಬಿಡಲು ಬರಲೇ ಇಲ್ಲ. ಸದ್ಯ ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.
ಕಂಗನಾ ರಣಾವತ್ ಅವರು ಈ ವೇಳೆ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹಾಗೂ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಕೂಡ ಈ ವೇಳೆ ಉಪಸ್ಥಿತರಿದ್ದರು. ಕಂಗನಾ ಬಿಲ್ಲನ್ನು ಕೈಗೆ ಎತ್ತಿಕೊಂಡಿದ್ದಾರೆ. ಆದರೆ ಬಾಣ ಬಿಡಲು ನೋಡಿದರೂ ಅದು ಸಾಧ್ಯವಾಗಿಲ್ಲ. ಆಗ ಕಂಗನಾ ನಕ್ಕಿದ್ದಾರೆ. ಬೇರೆಯವರು ಬಾಣ ಬಿಟ್ಟಿದ್ದಾರೆ. ಆ ಬಳಿಕ ಅವರು ‘ಜೈ ಶ್ರೀ ರಾಮ್’ ಎಂದು ಕೂಗಿದ್ದಾರೆ.
ಕೆಂಪುಕೋಟೆಯ ರಾಮಲೀಲಾ ಮೈದಾನದಲ್ಲಿ ಪ್ರತೀ ವರ್ಷ ರಾವಣನ ಪ್ರತಿಕೃತಿ ದಹನ ಮಾಡುವ ಮೂಲಕ ವಿಜಯದಶಮಿಯನ್ನು ಆಚರಿಸಲಾಗುತ್ತದೆ. ಹೀಗೆ 50 ವರ್ಷಗಳ ಇತಿಹಾಸದಲ್ಲಿ ಮಹಿಳೆಯೊಬ್ಬರು ರಾವಣನ ಪ್ರತಿಕೃತಿಗೆ ಬೆಂಕಿ ಹಚ್ಚಿದ್ದು ಇದೇ ಮೊದಲು ಎಂದು ದೆಹಲಿಯ ಲವ್ ಕುಶ್ ರಾಮಲೀಲಾ ಸಮಿತಿಯ ಅಧ್ಯಕ್ಷ ಅರ್ಜುನ್ ಸಿಂಗ್ ಹೇಳಿದ್ದಾರೆ.