ಮಂಗಳಾದೇವಿ ನವರಾತ್ರಿ ಉತ್ಸವ- ಉಳಿಕೆ ಸ್ಟಾಲ್ ಗಳಿಗೆ ನಾಳೆ ಬೆಳಿಗ್ಗೆಯೇ ಬಹಿರಂಗ ಹರಾಜು ಮಾಡಲು ಜಿಲ್ಲಾಡಳಿತ ಸೂಚನೆ
Friday, October 13, 2023
ಮಂಗಳೂರು: ಮಂಗಳಾದೇವಿ ನವರಾತ್ರಿ ಉತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅನ್ಯಾಯ ಆಗಿರುವ ವಿಚಾರದಲ್ಲಿ ಮಧ್ಯಪ್ರವೇಶಿಸಿರುವ ಜಿಲ್ಲಾಡಳಿತ ಏಲಂ ಆಗದೆ ಉಳಿಕೆಯಾಗಿರುವ ಮಳಿಗೆಗಳಿಗೆ ನಾಳೆ ಬೆಳಿಗ್ಗೆಯೆ ಬಹಿರಂಗ ಹರಾಜು ಮಾಡುವಂತೆ ದೇವಸ್ಥಾನಕ್ಕೆ ಸೂಚಿಸಿದೆ.
ಬೀದಿಬದಿ ಮತ್ತು ಜಾತ್ರೆ ವ್ಯಾಪಾರಸ್ಥರ ಸಂಘದ ಪ್ರಮುಖರು ಇಂದು ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ಬಳಿಕ ದಕ್ಷಿಣ ಕನ್ನಡ ಜಿಲ್ಲಾ ಅಪರ ಜಿಲ್ಲಾಧಿಕಾರಿ ಜಿ.ಸಂತೋಷ್ ಕುಮಾರ್ ಅವರಿಗೆ ಈ ಬಗ್ಗೆ ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನ ಆಡಳಿತ ಮಂಡಳಿಯನ್ನು ಕರೆಸಿದ ಅಪರ ಜಿಲ್ಲಾಧಿಕಾರಿಗಳು ಏಲಂ ಆಗದೆ ಉಳಿದಿರುವ ಮಳಿಗೆಗಳಿಗೆ ನಾಳೆ ಬೆಳಿಗ್ಗೆಯೆ ಬಹಿರಂಗ ಹರಾಜು ಮಾಡಿ ನೀಡುವಂತೆ ಸೂಚನೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಉಪ ಆಯುಕ್ತರಾದ (ಕಂದಾಯ) ರೇಖಾ ಶೆಟ್ಟಿ , ಸಹಾಯಕ ಪೊಲೀಸ್ ಆಯುಕ್ತರಾದ ಮಹೇಶ್ ಕುಮಾರ್, ಮಂಗಳಾದೇವಿ ದೇವಸ್ಥಾನದ ಪ್ರತಿನಿಧಿಗಳು, ಬೀದಿಬದಿ ಮತ್ತು ಜಾತ್ರೆ ವ್ಯಾಪಾರಸ್ಥರ ಸಂಘದ ಪ್ರಮುಖರಾದ ಬಿ.ಕೆ ಇಮ್ತಿಯಾಝ್, ಸುನಿಲ್ ಕುಮಾರ್ ಬಜಾಲ್, ಹರೀಶ್ ಪೂಜಾರಿ, ಪ್ರವೀಣ್ ಕುಮಾರ್ ಕದ್ರಿ, ರಿಯಾಜ್, ಶಾಫಿ ಬೆಂಗ್ರೆ, ಆಸೀಫ್ ಬಾವ ಉಪಸ್ಥಿತರಿದ್ದರು.