ಮಂಗಳೂರು: ಕುದ್ರೋಳಿಯಲ್ಲಿ ಶುಚಿತ್ವವಿಲ್ಲದ ಮಟ್ಕಾ ಸೋಡಾ ಮಾರಾಟ - ಆರೋಗ್ಯಾಧಿಕಾರಿಗಳ ದಾಳಿ
Tuesday, October 24, 2023
ಮಂಗಳೂರು: ದಸರಾ ಹಿನ್ನಲೆಯಲ್ಲಿ ಶ್ರೀಕ್ಷೇತ್ರ ಕುದ್ರೋಳಿ ಬಳಿಯಿರುವ ಮಟ್ಕಾ ಸ್ಟಾಲ್ ನಲ್ಲಿ ಅಶುಚಿಯ ಮಟ್ಕಾ ಸೋಡಾ ಮಾರಾಟ ಮಾಡಲಾಗುತ್ತಿದೆ ಎಂಬ ವೀಡಿಯೋ ವೈರಲ್ ಆಗಿರುವ ಬೆನ್ನಲ್ಲೇ ಮಂಗಳೂರು ಮನಪಾ ಆರೋಗ್ಯಾಧಿಕಾರಿಗಳು ದಾಳಿ ನಡೆಸಿ ಮಟ್ಕಾ ಸ್ಟಾಲ್ ಅನ್ನು ತೆಗೆಸಿದ್ದಾರೆ.
ಈ ಸ್ಟಾಲ್ ನಲ್ಲಿ ಸ್ವಚ್ಛತೆಗೆ ಆದ್ಯತೆ ನೀಡದೆ ಮಟ್ಕಾ ಸೋಡಾ ಮಾರಾಟ ಮಾಡಲಾಗುತ್ತಿತ್ತು. ಇದನ್ನು ಗಮನಿಸಿರುವ ಯಾರೋ ವೀಡಿಯೋ ಮಾಡಿ ಸಾಮಾಜಿಕ ತಾಣಗಳಲ್ಲಿ ವೈರಲ್ ಮಾಡಿದ್ದರು. ಕೊಳಕು ನೀರಿನಲ್ಲಿ ಮಟ್ಕಾ ಪಾಟ್ ಗಳನ್ನು ತೊಳೆಯುವುದು, ಸ್ಟಾಲ್ ಸಿಬ್ಬಂದಿ ತಂಬಾಕು ಜಗಿದು ಉಗುಳಿದ ಬಳಿಕ ಅದೇ ನೀರಿನಲ್ಲಿ ಪಾಟ್ ತೊಳೆಯುವುದು ಹೀಗೆ ಶುಚಿತ್ವವೇ ಇಲ್ಲದ ರೀತಿಯ ದೃಶ್ಯಗಳು ವೈರಲ್ ಆದ ವೀಡಿಯೋದಲ್ಲಿ ಸೆರೆಯಾಗಿತ್ತು.
ವಿಡಿಯೋ ವೈರಲ್ ಬೆನ್ನಲ್ಲೇ ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿಗಳ ಮಟ್ಕಾ ಸ್ಟಾಲ್ ಗೆ ದಾಳಿ ಮಾಡಿ ಮಟ್ಕಾ ಸೋಡಾ ಶಾಪ್ ಸೀಝ್ ಮಾಡಿದ್ದಾರೆ. ಮಟ್ಕಾ ಸೋಡಾ ಪಾಟ್ ಗಳ ಸಹಿತ ಸೊತ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆ ಬಳಿಕ ಕುದ್ರೋಳಿ ದೇವಸ್ಥಾನದ ದಸರಾ ಸಂತೆಯ ವಿವಿಧ ಉಳಿದ ಸ್ಟಾಲ್ ಗಳಲ್ಲೂ ಅಧಿಕಾರಿಗಳು ಶುಚಿತ್ವದ ಪರಿಶೀಲನೆ ನಡೆಸಿದ್ದಾರೆ. ಶುಚಿತ್ವ ಕಾಪಾಡದಿದ್ದಲ್ಲಿ ಸ್ಟಾಲ್ ಸೀಝ್ ಮಾಡುವ ಎಚ್ಚರಿಕೆ ನೀಡಿದ್ದಾರೆ.