ಪತ್ನಿಯನ್ನೇ ಕೊಡಲಿಯಿಂದ ಕಡಿದು ಹತ್ಯೆಗೈದ ಪತಿ
Saturday, October 14, 2023
ಚಿಕ್ಕಮಗಳೂರು: ಕೈಹಿಡಿದ ಪತ್ನಿಯನ್ನು ಪತಿಯೇ ಹತ್ಯೆ ಮಾಡಿರುವ ಘಟನೆ ಶುಕ್ರವಾರ ರಾತ್ರಿ ಮೂಡಿಗೆರೆ ತಾಲೂಕಿನ ಕಿರುಗುಂದ ಗ್ರಾಮದಲ್ಲಿ ನಡೆದಿದೆ.
ಕಿರುಗುಂದ ಗ್ರಾಮದ ಪರಿಶಿಷ್ಟರ ಬಡಾವಣೆ ನಿವಾಸಿ ಪದ್ಮಾಕ್ಷಿ (40) ಕೊಲೆಗೀಡಾದ ಮಹಿಳೆ. ಪತಿ ಚಂದ್ರು ಪತ್ನಿಯನ್ನು ಹತ್ಯೆ ಮಾಡಿದ ಆರೋಪಿ.
ಗುರುವಾರ ರಾತ್ರಿ ಚಂದ್ರು ಕುಡಿದು ಮನೆಗೆ ಬಂದಿದ್ದು, ಕುಡಿತದ ವಿಚಾರಕ್ಕೆ ಪತಿ, ಪತ್ನಿ ನಡುವೆ ಗಲಾಟೆ ನಡೆದಿದೆ. ಇಬ್ಬರ ನಡುವಿನ ಜಗಳ ತಾರಕಕ್ಕೇರಿದ್ದ ವೇಳೆ ಕುಪಿತನಾದ ಪತಿ ಚಂದ್ರು ಕೊಡಲಿಯಿಂದ ಪತ್ನಿ ಪದ್ಮಾಕ್ಷಿ ಮೇಲೆ ಹಲ್ಲೆ ಮಾಡಿದ್ದಾನೆ. ಈ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಪದ್ಮಾಕ್ಷಿ ಮನೆಯಂಗಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಪತ್ನಿ ಮೃತಪಟ್ಟಿರುವುದು ಗೊತ್ತಾಗದೇ ಪತಿ ಚಂದ್ರು ಮನೆಯೊಳಗೆ ಮಲಗಿದ್ದು, ಬೆಳಗ್ಗೆ ವಿಚಾರ ಗೊತ್ತಾಗಿದೆ ಎಂದು ಹೇಳಲಾಗಿದೆ. ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು ಆರೋಪಿ ಚಂದ್ರುನನ್ನು ವಶಕ್ಕೆ ಪಡೆದಿದ್ದಾರೆಂದು ತಿಳಿದು ಬಂದಿದೆ.