ಉಡುಪಿ: ದಲಿತ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ ಮೂರು ವರ್ಷ ಕಾರಾಗೃಹ ಶಿಕ್ಷೆ
Thursday, October 12, 2023
ಉಡುಪಿ: ಅಪ್ರಾಪ್ತ ದಲಿತ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಮೂರು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದಲ್ಲಿನ ಪೋಕ್ಸೊ ತ್ವರಿತ ವಿಶೇಷ ನ್ಯಾಯಾಲಯ ಬುಧವಾರ ಆದೇಶಿಸಿದೆ
ಕುಂದಾಪುರದ ಅನೂಪ್ (20) ಶಿಕ್ಷೆಗೊಳಗಾದ ಆರೋಪಿ.
ಅನೂಪ್ 2019ರಲ್ಲಿ ಸಾಮಾಜಿಕ ಜಾಲತಾಣದಲ್ಲಿ 16 ವರ್ಷದ ಅಪ್ರಾಪ್ತೆಯ ಪರಿಚಯವಾಗಿದೆ. ಬಳಿಕ ಆಕೆಯ ಅಶ್ಲೀಲ ಫೋಟೊಗಳನ್ನು ತನ್ನ ಮೊಬೈಲ್‌ಗೆ ತರಿಸಿಕೊಂಡಿದ್ದಾನೆ. ಬಳಿಕ ಫೋಟೋಗಳನ್ನು ಇರಿಸಿಕೊಂಡು ಆಕೆಯನ್ನು ಹೆದರಿಸಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎಂದು ದೂರಲಾಗಿತ್ತು. ಈ ಬಗ್ಗೆ ಆಗಿನ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ. ಆರೋಪಿಯ ವಿರುದ್ಧ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಧೀಶ ಶ್ರೀನಿವಾಸ ಸುವರ್ಣ, ಸಾಕ್ಷಾಧಾರಗಳಿಂದ ಆರೋಪಿ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ ಮೂರು ವರ್ಷ ಜೈಲು ಶಿಕ್ಷೆ ಹಾಗೂ 5,000 ರೂ. ದಂಡ ವಿಧಿಸಿ ಆದೇಶಿಸಿದರು. ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಹಕರಿಸಿದ ಲಾಡ್ಜ್ ಒಂದರ ರಿಸೆಪ್ಷನಿಸ್ಟ್ ನನ್ನು ಸಾಕ್ಷಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಿ ನ್ಯಾಯಾಧೀಶರು ಆದೇಶ ನೀಡಿದರು.
ನೊಂದ ಬಾಲಕಿಗೆ 25,000ರೂ. ಪರಿಹಾರವಾಗಿ ನೀಡುವಂತೆ ಸರಕಾರಕ್ಕೆ ನಿರ್ದೇಶನ ನೀಡಿ ನ್ಯಾಯಾಲಯ ಆದೇಶಿಸಿತು. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ವೈ.ರಾಘವೇಂದ್ರ ವಿಚಾರಣೆ ನಡೆಸಿದ್ದು ಕುಂದಾಪುರ ನ್ಯಾಯಾಲಯದ ಸರಕಾರಿ ಅಭಿಯೋಜಕ ಹರೀಶ್ಚಂದ್ರ ಉದ್ಯಾವರ ವಾದ ಮಂಡಿಸಿದ್ದರು.