ಇತಿಹಾಸ ಮರುಕಳಿಸುತ್ತಿದೆ ಎಂದ ಶೋಯೆಬ್ ಅಖ್ತರ್: ಭಾರತೀಯರ ಟ್ರೋಲ್ ಗೆ ಬೆದರಿ ಪೋಸ್ಟ್ ಡಿಲಿಟ್
Saturday, October 14, 2023
ನವದೆಹಲಿ: ಭಾರತ ಹಾಗೂ ಪಾಕ್ ನಡುವೆ ಇಂದು ಮಧ್ಯಾಹ್ನ ಗುಜರಾತ್ ನ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ವಿಶ್ವಕಪ್ ಟೂರ್ನಿಯ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಇದಕ್ಕೂ ಮುನ್ನ ಪಾಕ್ ದಿಗ್ಗಜ, ಮಾಜಿ ವೇಗಿ ಶೋಯೆಬ್ ಅಖ್ತರ್ ಅವರು ಪಂದ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ಟ್ರೋಲ್ಗೊಳಗಿದ್ದಾರೆ.
ತಾವು ಪಾಕ್ ಪರ ಆಡುತ್ತಿದ್ದ ವೇಳೆ ವಿಕೆಟ್ ಪಡೆದು ಸಂಭ್ರಮಿಸಿರುವ ಫೋಟೋವೊಂದನ್ನು ಅಖ್ತರ್ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಜೊತೆಗೆ ನಾಳೆ ಇತಿಹಾಸ ಮರುಕಳಿಸುತ್ತದೆ ಎಂದು ಅಡಿಬರಹವನ್ನೂ ನೀಡಿದ್ದರು. ಇದು ಭಾರತೀಯರ ಕಣ್ಣಿಗೆ ಬೀಳುತ್ತಿದ್ದಂತೆ ಇಂಡಿಯಾ-ಪಾಕ್ ನಡುವಿನ ಕ್ರಿಕೆಟ್ ಇತಿಹಾಸ, ಅದರಲ್ಲೂ ವಿಶ್ವಕಪ್ ಟೂರ್ನಿಯಲ್ಲಿ ಉಭಯ ದೇಶಗಳ ಸಾಧನೆಯನ್ನು ನೆನಪು ಮಾಡಿ ಅಖ್ತರ್ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದಾರೆ. ಹೀಗೆ ಭಾರತೀಯರ ಪ್ರತಿಕ್ರಿಯೆ ಬರುತ್ತಿದ್ದಂತೆ ಮುಜುಗರಕ್ಕೀಡಾದ ಶೋಯೆಬ್ ಅಖ್ತರ್, ಟೆಸ್ಟ್ ಪಂದ್ಯದ ವೇಳೆ ಸಚಿನ್ ತೆಂಡೂಲ್ಕರ್ ಅವರನ್ನು ಔಟ್ ಮಾಡಿದ ಫೋಟೋವನ್ನು ಜಾಲತಾಣದಿಂದ ಡಿಲೀಟ್ ಮಾಡಿದ್ದಾರೆ.
ಕ್ರಿಕೆಟ್ ಹುಟ್ಟಿನಿಂದ ಹಿಡಿದು ಇಂದಿನವರೆಗೂ ಇಂಡಿಯಾ-ಪಾಕಿಸ್ತಾನ ಪಂದ್ಯಾಟ ಅತ್ಯಂತ ರೋಚಕತೆ ಕಾಯ್ದುಕೊಂಡಿದೆ. ಅದರಲ್ಲೂ ವಿಶ್ವಕಪ್ ಕದನಗಳ ಬಗ್ಗೆಯಂತೂ ಹೇಳತೀರದು, ಐಸಿಸಿ ಟಿ20 ಮತ್ತು ಏಕದಿನ ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಒಟ್ಟು 14 ಬಾರಿ ಉಭಯ ತಂಡಗಳು ಮುಖಾಮುಖಿಯಾಗಿವೆ. ಗಮನಾರ್ಹ ಸಂಗತಿ ಏನೆಂದರೆ, ಏಕದಿನ ವಿಶ್ವಕಪ್ನಲ್ಲಿ ಏಳು ಬಾರಿಯೂ ಭಾರತವೇ ವಿಜಯೋತ್ಸವ ಆಚರಿಸಿದೆ. ಟಿ20 ವಿಶ್ವಕಪ್ನಲ್ಲಿಯೂ 7 ಬಾರಿ ಉಭಯ ತಂಡಗಳು ಸೆಣಸಾಡಿದ್ದು, ಪಾಕಿಸ್ತಾನ 2021ರಲ್ಲಿ ಒಂದು ಬಾರಿ ಮಾತ್ರ ಗೆಲುವು ದಾಖಲಿಸಿದೆ. ಎರಡು ಮಾದರಿಯಲ್ಲೂ ಭಾರತವೇ ಪಾರುಪತ್ಯ ಸಾಧಿಸಿದೆ. ಆದರೆ, ಅಖ್ತರ್ ಇತಿಹಾಸ ಮರುಕಳಿಸುತ್ತದೆ ಎಂದು ಪೋಸ್ಟ್ ಮಾಡಿರುವುದು ಹಾಸ್ಯಾಸ್ಪದ ಎಂಬಂತೆ ತೋರುತ್ತಿದೆ.
ಇಂದು ಮಧ್ಯಾಹ್ನ ದಾಯಾದಿಗಳ ಕ್ರಿಕೆಟ್ ಕದನ ನಡೆಯಲಿದೆ. ವಿಶ್ವಕಪ್ಗೂ ಮುನ್ನ ನಡೆದ ಏಷ್ಯಾ ಕಪ್ನಲ್ಲಿ ಇಂಡೋ-ಪಾಕ್ ಎರಡು ಬಾರಿ ಮುಖಾಮುಖಿಯಾದವು. ಇದರಲ್ಲಿ ಒಂದು ಪಂದ್ಯ ಮಳೆಯಿಂದ ರದ್ದಾದರೆ, ಇನ್ನೊಂದು ಪಂದ್ಯದಲ್ಲಿ ಭಾರತ, ಪಾಕ್ ವಿರುದ್ಧ ಅಮೋಘ ಜಯ ದಾಖಲಿಸಿತು. ಇನ್ನು ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್ನಲ್ಲಿ ಭಾರತ ಮತ್ತು ಪಾಕಿಸ್ತಾನ ಎರಡೆರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಕಂಡಿವೆ. ಉಭಯ ತಂಡಗಳಿಗೆ ಇಂದು ನಡೆಯಲಿರುವ ಪಂದ್ಯ ಮೂರನೇ ಪಂದ್ಯವಾಗಿದ್ದು, ಹ್ಯಾಟ್ರಿಕ್ ಗೆಲುವು ಯಾರಿಗೆ ಲಭಿಸಲಿದೆ ಎಂದು ನೋಡಬೇಕಿದೆ.