ಉಳ್ಳಾಲ: ಪರೀಕ್ಷೆಯಲ್ಲಿ ಕಳಪೆ ಫಲಿತಾಂಶ - ಗಣಿತ ಶಿಕ್ಷಕಿ ನೀರಿನ ಬಾಟಲಿಗೆ ಅವಧಿ ಮೀರಿದ ಮಾತ್ರೆ ಹುಡಿ ಹಾಕಿ ಕುಕೃತ್ಯ ಮೆರೆದ ಬಾಲಕಿಯರು
Friday, October 6, 2023
ಉಳ್ಳಾಲ: ಪರೀಕ್ಷೆಯಲ್ಲಿ ಕಳಪೆ ಫಲಿತಾಂಶ ಪಡೆದಿದ್ದ ಆರನೇ ತರಗತಿಯ ವಿದ್ಯಾರ್ಥಿನಿ ತನ್ನ ಸಹಪಾಠಿಯೊಂದಿಗೆ ಸೇರಿ ಶಿಕ್ಷಕಿಯ ನೀರಿನ ಬಾಟಲಿಗೆ ಅವಧಿ ಮುಗಿದಿದ್ದ ಮಾತ್ರೆಗಳನ್ನ ಹಾಕಿ ಸೇಡು ತೀರಿಸಿರುವ ಆತಂಕಕಾರಿ ಘಟನೆ ನಗರದ ಉಳ್ಳಾಲದ ಖಾಸಗಿ ಶಾಲೆಯಲ್ಲಿ ನಡೆದಿದೆ. ಈ ನೀರನ್ನು ಕುಡಿದ ಪರಿಣಾಮ ಇಬ್ಬರು ಶಿಕ್ಷಕಿಯರು ಅಸ್ವಸ್ಥಗೊಂಡಿದ್ದಾರೆ.
ಶಾಲೆಯಲ್ಲಿ ಯುನಿಟ್ ಟೆಸ್ಟ್ ನ ಗಣಿತ ವಿಷಯದಲ್ಲಿ ಆರನೇ ತರಗತಿ ವಿದ್ಯಾರ್ಥಿನಿಯೊಬ್ಬಳಿಗೆ ಕಡಿಮೆ ಅಂಕ ಬಂದಿದೆ. ಪೇಪರ್ ಕರೆಕ್ಷನ್ ಮಾಡಿರುವ ಗಣಿತ ಶಿಕ್ಷಕಿ ಸರಿಯಿದ್ದ ಉತ್ತರಕ್ಕೂ ತಪ್ಪು ಹಾಕಿದ್ದಾರೆನ್ನುವ ಭಾವನೆ ವಿದ್ಯಾರ್ಥಿನಿಯಲ್ಲಿ ಹುಟ್ಟಿದೆ. ಅದಕ್ಕಾಗಿ ಶಿಕ್ಷಕಿ ವಿರುದ್ಧ ಸೇಡು ತೀರಿಸಲು ವಿದ್ಯಾರ್ಥಿನಿ ತನ್ನ ಸಹಪಾಠಿ ಸಹಾಯ ಪಡೆದುಕೊಂಡು ಸ್ಟಾಫ್ ರೂಮ್ ನಲ್ಲಿ ಯಾರೂ ಇಲ್ಲದ ವೇಳೆ ಅವಧಿ ಮೀರಿದ್ದ ಮಾತ್ರೆಗಳನ್ನು ಗಣಿತ ಶಿಕ್ಷಕಿಯ ನೀರಿನ ಬಾಟಲಿಗೆ ಹಾಕಿದ್ದಾಳೆ. ಇದೇ ನೀರು ಕುಡಿದು ಗಣಿತ ಶಿಕ್ಷಕಿ ಅಸ್ವಸ್ಥಗೊಂಡಿದ್ದಾರೆ. ಅದೇ ನೀರು ಸೇವಿಸಿದ ಮತ್ತೋರ್ವ ಶಿಕ್ಷಕಿಯ ಮುಖ ಊದಿಕೊಂಡಿದೆ. ಅನುಮಾನಗೊಂಡ ಶಿಕ್ಷಕರು ನೀರಿನ ಬಾಟಲಿ ಪರಿಶೀಲಿಸಿದಾಗ ನೀರಿನಲ್ಲಿ ಮಾತ್ರೆಗಳು ಕರಗಿದ್ದು ಪತ್ತೆಯಾಗಿದೆ. ಸಿಸಿಟಿವಿ ಪರಿಶೀಲನೆ ಮಾಡಿದಾಗ ವಿದ್ಯಾರ್ಥಿನಿಯರ ಕುಕೃತ್ಯ ಬೆಳಕಿಗೆ ಬಂದಿದೆ.
ಇದೀಗ ಕುಕೃತ್ಯವೆಸಗಿರುವ ವಿದ್ಯಾರ್ಥಿನಿಯರನ್ನು ಶಾಲಾಡಳಿತವು ಟಿಸಿ ಕೊಟ್ಟು ಡಿಬಾರ್ ಮಾಡಿದೆ. ಆದರೆ ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವಿಚಾರಣೆ ನಡೆಸಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.