ಕಾನೂನು ವಿದ್ಯಾರ್ಥಿಗೆ ನಗ್ನಳಾಗಿ ಯುವತಿಯಿಂದ ವೀಡಿಯೋ ಕಾಲ್: ಯುವಕನಿಗೂ ಬೆತ್ತಲಾಗುವಂತೆ ಪುಸಲಾಯಿಸಿ ಬ್ಲ್ಯಾಕ್ ಮೇಲ್
Friday, October 6, 2023
ಉತ್ತರ ಪ್ರದೇಶ: ಬೆತ್ತಲೆಯಾಗಿ ವೀಡಿಯೋ ಕಾಲ್ ಮಾಡಿದ ಯುವತಿಯೊಬ್ಬಳು ಕಾನೂನು ವಿದ್ಯಾರ್ಥಿಗೂ ಬೆತ್ತಲಾಗುವಂತೆ ಪುಸಲಾಯಿಸಿ ಬೆತ್ತಲಾದ ಆತನ ವೀಡಿಯೋ ವನ್ನು ವೈರಲ್ ಮಾಡುತ್ತೇವೆಂದು ಬೆದರಿಸಿ 77 ಸಾವಿರ ರೂ. ವಸೂಲಿ ಮಾಡಿರುವ ಘಟನೆ ಉತ್ತರ ಪ್ರದೇಶದ ಲಖನೌನಲ್ಲಿ ನಡೆದಿದೆ.
ಬಿಹಾರ ಮೂಲದ ಕಾನೂನು ವಿದ್ಯಾರ್ಥಿ ಕಾಲೇಜ್‌ನ ಹಾಸ್ಟೆಲ್ ಕೊಠಡಿಯಲ್ಲಿದ್ದ. ಈತನ ಮೊಬೈಲ್‌ಗೆ ಅಪರಿಚಿತ ಸಂಖ್ಯೆಯಿಂದ ವೀಡಿಯೋ ಕಾಲ್ ಬಂದಿತ್ತು. ಕಾಲ್ ರಿಸೀವ್ ಮಾಡಿದ ತಕ್ಷಣ ಬೆತ್ತಲಾಗಿದ್ದ ಯುವತಿಯೊಬ್ಬಳ ವೀಡಿಯೋ ಕಂಡು ಬಂದಿದೆ. ಆ ಯುವತಿಯು ನೀನೂ ಕೂಡಾ ಬೆತ್ತಲಾಗು ಎಂದು ವಿದ್ಯಾರ್ಥಿಯನ್ನು ಪುಸಲಾಯಿಸಿದ್ದಾಳೆ. ಯುವತಿಯ ಮಾತಿಗೆ ಮರುಳಾದ ವಿದ್ಯಾರ್ಥಿ ತಾನೂ ಬೆತ್ತಲಾಗಿದ್ದಾನೆ. ಕೇವಲ 30 ಸೆಕೆಂಡ್‌ನಲ್ಲಿಯೇ ಈ ಕರೆ ಕಡಿತವಾಗಿದೆ. ಇದಾದ ತಕ್ಷಣ ವಿದ್ಯಾರ್ಥಿಯ ಮೊಬೈಲ್‌ಗೆ ಬೆದರಿಕೆ ಕರೆ ಮಾಡಿದ್ದ ಯುವತಿ ಹಣ ಕೊಡು, ಇಲ್ಲವಾದ್ರೆ ನಿನ್ನ ಬೆತ್ತಲೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗ ಮಾಡುತ್ತೇನೆ ಎಂದು ಬೆದರಿಕೆ ಹಾಕಿದಳು ಎನ್ನಲಾಗಿದೆ.
ಯುವತಿಯ ಬೆದರಿಕೆ ಕರೆಯಿಂದ ಕಂಗಾಲಾದ ಕಾನೂನು ವಿದ್ಯಾರ್ಥಿ ತಕ್ಷಣ ತನ್ನ ಎರಡು ಬ್ಯಾಂಕ್ ಖಾತೆಗಳಿಂದ ಒಟ್ಟು 77,599 ರೂಪಾಯಿಯನ್ನು ಯುವತಿಯ ಖಾತೆಗೆ ವರ್ಗಾಯಿಸಿದ್ದಾನೆ. ಯುವತಿ ತನಗೆ ಕರೆ ಮಾಡಿರುವ ಮೊಬೈಲ್ ಸಂಖ್ಯೆ ಹನ್ಸ್‌ರಾಜ್ ಎಂಬುವನಿಗೆ ಸೇರಿದ್ದು ಎಂದು ವಿದ್ಯಾರ್ಥಿ ಪತ್ತೆ ಹಚ್ಚಿದ್ದಾನೆ. ಮತ್ತೊಂದು ನಂಬರ್‌ನ ಮೂಲ ಗೊತ್ತಾಗಿಲ್ಲ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ವಿಡಿಯೋ ಕರೆಯ ಬಳಿಕ ಆತನಿಗೆ ಮೊದಲಿಗೆ ಯುವತಿಯ ಮೊಬೈಲ್ ಕರೆ ಬಂದಿದೆ. ಆಕೆ ವಿಡಿಯೋ ಡಿಲೀಟ್ ಮಾಡಲು 28 ಸಾವಿರ ರೂ. ಕೊಡು ಎಂದು ಬೇಡಿಕೆ ಇಟ್ಟಿದ್ದಾಳೆ. ಆದರೆ ಯುವಕ ಈ ಬೇಡಿಕೆ ತಿರಸ್ಕರಿಸಿ ಹಣ ಕೊಡೋದಿಲ್ಲ ಎಂದಿದ್ದಾನೆ. ಈ ವೇಳೆ ಯುವತಿ ಕರೆ ಕಟ್ ಮಾಡಿದ್ದಾಳೆ. ಬಳಿಕ ಪುರುಷನೊಬ್ಬನ ಮೊಬೈಲ್ ಕರೆ ಬಂದಿದೆ. ಆತ ತನ್ನನ್ನು ತಾನು ದಿಲ್ಲಿಯ ಪೊಲೀಸ್ ಆಯುಕ್ತ ಎಂದು ಪರಿಚಯಿಸಿಕೊಂಡಿದ್ದಾನೆ. ನೀನು ಹಣ ಕೊಡದಿದ್ದರೆ ನಿನ್ನ ಭವಿಷ್ಯವನ್ನೇ ಹಾಳು ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.
ಯುವತಿ ನಿನ್ನೊಂದಿಗೆ ಬೆತ್ತಲೆಯಾಗಿ ವಿಡಿಯೋ ಸಂಭಾಷಣೆ ಮಾಡಿದ್ದಾಳೆ. ಈ ಸಂಬಂಧ ನಾವು ಎಫ್‌ಐಆರ್ ದಾಖಲು ಮಾಡಿಕೊಂಡಿದ್ದೇವೆ. ಈಗಾಗಲೇ ವಿಡಿಯೋ ಯೂಟ್ಯೂಬ್‌ನಲ್ಲಿದೆ. ನೀನು ಹಣ ಕೊಡದೇ ಹೋದರೆ ಈ ವಿಡಿಯೋ ವೈರಲ್ ಆಗುತ್ತದೆ ಎಂದು ವಿದ್ಯಾರ್ಥಿಗೆ ಬೆದರಿಕೆ ಹಾಕಿದ್ದಾರೆ. ಹೀಗಾಗಿ, ಆತ ದಿಕ್ಕೇ ತೋಚದಂತಾಗಿ ಹಣ ನೀಡಿದ್ದಾನೆ ಎಂದು ಎಫ್‌ಐಆರ್‌ನಲ್ಲಿ ನಮೂದಿಸಲಾಗಿದೆ.