ಮನೆಯಲ್ಲೇ ಕುಕ್ಕರ್ ನಲ್ಲಿ ಡ್ರಗ್ಸ್ ತಯಾರಿಸಿ ದೇಶ - ವಿದೇಶಗಳಿಗೆ ಮಾರಾಟ - ವಿದೇಶಿ ಪ್ರಜೆ 10ಕೋಟಿ ರೂ. ಎಂಡಿಎಂಎಯೊಂದಿಗೆ ವಶಕ್ಕೆ
Saturday, November 11, 2023
ಬೆಂಗಳೂರು: ಕುಕ್ಕರ್‌ನಲ್ಲಿ ಸಿಂಥೆಟಿಕ್ ಮಾದಕದ್ರವ್ಯ ತಯಾರಿಸಿ ದೇಶ - ವಿದೇಶಗಳಿಗೆ ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಯನ್ನು ಬಂಧಿಸಿದ ಸಿಸಿಬಿ ಪೊಲೀಸರು ಆತನಿಂದ 10 ಕೋಟಿ ರೂ. ಮೌಲ್ಯದ ಎಂಡಿಎಂಎಯನ್ನು ವಶಕ್ಕೆ ಪಡೆಯಲಾಗಿದೆ.
ನೈಜಿರಿಯಾ ಮೂಲದ ಬೆಂಜಮೆನ್ ಅಲಿಯಾಸ್ ಚಿಡುಬೆಮು(40) ಬಂಧಿತ ಆರೋಪಿ.
ಆರೋಪಿ ಬೆಂಜಮೆನ್ ಮಾದಕದ್ರವ್ಯ ತಯಾರಿಸಲು ಬೇಕಾದ ಕಚ್ಚಾ ಪದಾರ್ಥಗಳನ್ನು ದೆಹಲಿ, ಮುಂಬೈನಿಂದ ತರಿಸುತ್ತಿದ್ದ. ಬಳಿಕ ಅಡುಗೆ ಮಾಡುವ ಪ್ರೆಷರ್ ಕುಕ್ಕರ್‌ನಲ್ಲಿ ಮಾದಕ ವಸ್ತುಗಳನ್ನು ಸಿದ್ಧಪಡಿಸಿ ದೇಶ- ವಿದೇಶಗಳಿಗೆ ಮಾರಾಟ ಮಾಡುತ್ತಿದ್ದ.
ಈತನಿಂದ 10 ಕೋಟಿ ರೂ. ಮೌಲ್ಯದ 5 ಕೆ.ಜಿ. ಎಂಡಿಎಂಎ, ಎಂಡಿಎಂಎ ತಯಾರು ಮಾಡಲು ಬೇಕಾದ ಕಚ್ಚಾ ಪದಾರ್ಥಗಳಾದ 12 ಕೆ.ಜಿ. 450 ಗ್ರಾಂ ಎಂಎಸ್ಎಂ, 5 ಕೆ.ಜಿ. ಸೋಡಿಯಂ ಹೈಡ್ರಾಕ್ಸೆಡ್ ಕ್ರಿಸ್ಟಲ್, 5 ಲೀಟರ್ ಹೈಡೋ ಕ್ಲೋರಿಕ್ ಆಸಿಡ್, 2.5 ಲೀಟರ್ ಅಸಿಟೋನ್, 5 ಲೀಟರ್ ಕುಕ್ಕರ್, ಗ್ಯಾಸ್ ಸ್ಟವ್, ಸಿಲಿಂಡರ್, 2 ಮೊಬೈಲ್‌ಗಳು, 2 ತೂಕದ ಯಂತ್ರಗಳು ಹಾಗೂ ಒಂದು ಬೈಕ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
2021ರಲ್ಲಿ ವ್ಯವಹಾರಿಕ ವೀಸಾದಲ್ಲು ಬೆಂಗಳೂರಿಗೆ ಬಂದಿರುವ ನೈಜಿರಿಯಾ ಮೂಲದ ಆರೋಪಿಯ ವೀಸಾ ಅವಧಿ 2022ರಲ್ಲೇ ಮುಕ್ತಾಯಗೊಂಡಿದೆ. ಆದರೂ, ಆರೋಪಿ ಅಕ್ರಮವಾಗಿ ವಾಸವಾಗಿದ್ದಾನೆ. ಬಟ್ಟೆ ವ್ಯಾಪಾರ ಮಾಡುವುದಾಗಿ ಹೇಳಿ ಆವಲಹಳ್ಳಿಯಲ್ಲಿ ಬಾಡಿಗೆ ಮನೆ ಪಡೆದುಕೊಂಡಿದ್ದ. ಆದರೆ, ಮುಂಬೈ, ದೆಹಲಿ ಮೂಲದ ಸ್ನೇಹಿತರೊಂದಿಗೆ ಸೇರಿ ಅಂತಾರಾಜ್ಯ ಮತ್ತು ಅಂತಾರಾಷ್ಟ್ರೀಯ ಡ್ರಗ್ಸ್ ದಂಧೆ ನಡೆಸುತ್ತಿದ್ದ ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ವಿವರಿಸಿದರು.
ಇತ್ತೀಚೆಗೆ ಆರೋಪಿಯನ್ನು ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಬಂಧಿಸಲಾಗಿತ್ತು. ಈತನ ವಿಚಾರಣೆಯಲ್ಲಿ ಮನೆಯಲ್ಲೇ ಡ್ರಗ್ಸ್ ತಯಾರು ಮಾಡುತ್ತಿದ್ದ ವಿಚಾರ ಬೆಳಕಿಗೆ ಬಂದಿತ್ತು. ಮುಂಬೈ, ದೆಹಲಿಯಲ್ಲಿರುವ ಸ್ನೇಹಿತರು ಹಾಗೂ ವಿದೇಶಿ ಪ್ರಜೆಗಳಿಂದ ಕಚ್ಚಾ ವಸ್ತುಗಳನ್ನು ಕೋರಿಯರ್‌ಗಳ ಮೂಲಕ ತರಿಸಿಕೊಳ್ಳುತ್ತಿದ್ದ. ಬಳಿಕ ಅವುಗಳನ್ನು ಯುಟ್ಯೂಬ್, ಆನ್‌ಲೈನ್ ಮೂಲಕ ಮಾಹಿತಿ ಪಡೆದು ಅಡುಗೆ ಮಾಡುವ ಕುಕ್ಕರ್‌ನಿಂದ ತಯಾರು ಮಾಡಿ, ಗ್ರಾಹಕರ ಬೇಡಿಕೆಗೆ ತಕ್ಕಂತೆ ಅಂತಾರಾಜ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೋರಿಯರ್ ಮೂಲಕವೇ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದರು.