ಕೊಲ್ಲೂರು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯನೆಂದು ನಂಬಿಸಿ 30.73 ಲಕ್ಷ ರೂ. ವಂಚನೆ
Sunday, November 5, 2023
ಉಡುಪಿ: ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯನೆಂದು ನಂಬಿಸಿದ ವ್ಯಕ್ತಿಯೊಬ್ಬನು ಬೆಂಗಳೂರು ಮೂಲದ ಕುಟುಂಬವೊಂದಕ್ಕೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡುವುದಾಗಿ ಹೇಳಿ 30.73 ಲಕ್ಷ ರೂ. ಹಣ ಪಡೆದು ವಂಚಿಸಿರುವ ಘಟನೆ ನಡೆದಿದೆ.
ಕೊಲ್ಲೂರು ನಿವಾಸಿ ಸುಧೀರ್ ಕುಮಾರ್ ಎಂಬಾತ ವಂಚನೆ ಎಸಗಿರುವ ಆರೋಪಿ. ಬೆಂಗಳೂರಿನ ದಿಲ್ಲಾ ಎಂಬಾಕೆ ತನ್ನ ಪತಿ ಹಾಗೂ ಕುಟುಂಬಸ್ಥರೊಂದಿಗೆ ಕೊಲ್ಲೂರು ದೇವಸ್ಥಾನಕ್ಕೆ ಬಂದಿದ್ದರು. ಈ ವೇಳೆ ತನ್ನ ಅಣ್ಣ ದಿಲೀಶ್ ಗೆ ಸುಧೀರ್ ಕುಮಾರ್ ಎಂಬಾತ ಪರಿಚಯ ಆಗಿದ್ದಾನೆ. ತಾನು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯನೆಂದು ನಂಬಿಸಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸುವುದಾಗಿ ಹೇಳಿ ಹಣ ಹಾಕುವಂತೆ ಕೇಳಿಕೊಂಡಿದ್ದ.
ಅಲ್ಲದೆ, ದಿಲ್ಲಾ ಅವರ ತಾಯಿಗೆ ಸಂಬಂಧಿಸಿದ ಜಾಗದ ಖಾತೆ ಬದಲಾವಣೆ ಮಾಡಿಸುವುದಾಗಿ ಹೇಳಿ ದಿಲ್ಲಾ ಹಾಗೂ ಅವರ ಅಣ್ಣ ದಿಲೀಶ್ ರಿಂದ ಒಟ್ಟು 30,73,600 ನಗದನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ಖಾತೆ ಬದಲಾವಣೆಗಾಗಿ ತಾಯಿಯ ಸಹಿ ಹಾಕಿಕೊಡುವಂತೆ ಕೇಳಿದ್ದರಿಂದ ಸಂಶಯಗೊಂಡು ದೇವಸ್ಥಾನಕ್ಕೆ ಬಂದು ವಿಚಾರಿಸಿದಾಗ ಸುಧೀರ್ ಎನ್ನುವ ವ್ಯಕ್ತಿ ಆಡಳಿತ ಮಂಡಳಿಯ ಸದಸ್ಯನಲ್ಲವೆಂಬುದು ತಿಳಿದುಬಂದಿದೆ. ಆದ್ದರಿಂದ ದಿಲ್ಲಾ ಅವರು ಸುಧೀರ್ ಕುಮಾರ್ ವಿರುದ್ಧ ಹಣ ವಂಚನೆ ಮಾಡಿದ್ದಾರೆಂದು ಕೊಲ್ಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.