ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮ ಸಾಗಾಟದ 42.90 ಲಕ್ಷದ ಚಿನ್ನ ವಶಕ್ಕೆ
Thursday, November 9, 2023
ಮಂಗಳೂರು: ನಗರದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಅಕ್ರಮ ಸಾಗಾಟದ 42.90 ಲಕ್ಷ ರೂ. ಮೌಲ್ಯದ ಚಿನ್ನವನ್ನು ಪತ್ತೆ ಹಚ್ಚಿ ವಶಕ್ಕೆ ತೆಗೆದುಕೊಂಡಿದ್ದಾರೆ.
ದುಬೈನಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಆಗಮಿಸಿದ ಕೇರಳ ಕಾಸರಗೋಡು ಮೂಲದ ಪ್ರಯಾಣಿಕ ಮಂಗಳೂರು ಏರ್ಪೊರ್ಟ್ ನಲ್ಲಿ ನವೆಂಬರ್ 5ರಂದು ಬಂದಿಳಿದಿದ್ದಾನೆ. ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ ವೇಳೆ ಈತ ಪುಡಿಯ ರೂಪದ 24 ಕ್ಯಾರೆಟ್ ಶುದ್ಧ ಚಿನ್ನವನ್ನು ಹಳದಿ ಬಣ್ಣದ ಪುಡಿಯಲ್ಲಿ ಮಿಶ್ರ ಮಾಡಿ ಪ್ಯಾಕೆಟ್ ನಲ್ಲಿರಿಸಿ 'ಟಿಫಾನಿ ಎಕ್ಲೇರ್ಸ್' ಎಂಬ ಚಾಕೊಲೇಟ್ ಕವರ್ ನೊಳಗೆ ಬಚ್ಚಿಟ್ಟು ಸಾಗಿಸುತ್ತಿದ್ದ. ಈ ಪ್ಯಾಕೆಟ್ ಅನ್ನು ತನ್ನ ಟ್ರ್ಯಾಲಿ ಬ್ಯಾಗ್ ನಲ್ಲಿ ಅಕ್ರಮವಾಗಿ ಮಾಡುತ್ತಿದ್ದ. ಈ ವೇಳೆ ಕಸ್ಟಮ್ಸ್ ಅಧಿಕಾರಿಗಳು 420 ಗ್ರಾಂ ತೂಕದ 25,49,400 ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫ್ಲೈಟ್ ನಲ್ಲಿ ದುಬೈನಿಂದ ಮಂಗಳೂರಿಗೆ ಅಕ್ಟೋಬರ್ 31 ಹಾಗೂ ನವೆಂಬರ್ 2ರಂದು ಪ್ರಯಾಣಿಸುತ್ತಿದ್ದ ಇಬ್ಬರು ಪ್ರಯಾಣಿಕರು ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದರು. ಈ ಗುಮಾನಿಯಲ್ಲಿ ಕಸ್ಟಮ್ಸ್ ಅಧಿಕಾರಿಗಳು ಕೂಲಂಕಷವಾಗಿ ತಪಾಸಣೆ ನಡೆಸಿದ್ದಾರೆ. ಆಗ ಅವರಲ್ಲಿ ಅಕ್ರಮ ಸಾಗಾಟದ ಚಿನ್ನ ಪತ್ತೆಯಾಗಿದೆ. ಇವರು ಚಿನ್ನವನ್ನು ಪೇಸ್ಟ್ ರೂಪಕ್ಕೆ ಪರಿವರ್ತಿಸಿ ಡಬ್ಬಲ್ ಲೇಯರ್ಡ್ ಒಳಉಡುಪು, ಸಾಕ್ಸ್ ಹಾಗೂ ಪ್ಯಾಂಟ್ ನ ಲೂಪ್ ಒಳಗೆ ಅಡಗಿಸಿ ಸಾಗಿಸುತ್ತಿದ್ದರು. ಅಲ್ಲದೆ ಸಾಕ್ಸ್ ಒಳಗಡೆ ಬಚ್ಚಿಟ್ಟು ಒಂದು ಚಿನ್ನದ ಸರವನ್ನು ಸಾಗಾಟ ಮಾಡಿರುವುದು ಪತ್ತೆಯಾಗಿದೆ. ಇವರಿಂದ ಒಟ್ಟು 288 ಗ್ರಾಂ ತೂಕದ ಮೌಲ್ಯ ರೂ. 17,40,660 ರೂ. ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಸೀಝ್ ಮಾಡಿದ್ದಾರೆ.