ಬೀದಿನಾಯಿ ಕಡಿತಕ್ಕೊಳಗಾಗಿ ಮೃತಪಟ್ಟ ಕುಟುಂಬಕ್ಕೆ 5ಲಕ್ಷ ರೂ. ಪರಿಹಾರ ನೀಡುವಂತೆ ಹೈಕೋರ್ಟ್ ಸೂಚನೆ
Thursday, November 16, 2023
ಬೆಂಗಳೂರು: ಬೀದಿನಾಯಿ ಕಡಿದ ಗಾಯಾಳುಗಳ ಚಿಕಿತ್ಸಾ ವೆಚ್ಚಕ್ಕೆ ಅದಕ್ಕೆ 5 ಸಾವಿರ ರೂ. ನೀಡಬೇಕು ಮತ್ತು ಒಂದು ವೇಳೆ ಗಾಯಾಳುಗಳು ಮೃತಪಟ್ಟರೆ ಕುಟುಂಬಕ್ಕೆ 5 ಲಕ್ಷ ರೂ.ಪರಿಹಾರ ನೀಡಬೇಕೆಂದು ಹೈಕೋರ್ಟ್ ರಾಜ್ಯ ಸರಕಾರಕ್ಕೆ ಆದೇಶಿಸಿದೆ.
ವಕೀಲ ರಮೇಶ್ ಎಲ್. ನಾಯಕ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ನೇತೃತ್ವದ ವಿಭಾಗೀಯ ಪೀಠ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಭೆ ನಡೆಸಬೇಕು. 4 ವಾರದಲ್ಲಿ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಬೇಕು ಎಂದು ಸರಕಾರಕ್ಕೆ ಸೂಚಿಸಿದೆ.
ಬೀದಿ ನಾಯಿಗಳಿಗೆ ಆಹಾರ ನೀಡಲು ಮಾರ್ಗಸೂಚಿ ಪ್ರಕಟಿಸಲಾಗಿದೆ. ಜನಸಾಮಾನ್ಯರಿಗೆ ಇದರ ತಿಳಿವಳಿಕೆ ನೀಡಲು ಕ್ರಮ ಕೈಗೊಳ್ಳಬೇಕು. ವಾರ್ತಾ, ಪ್ರಚಾರ ಇಲಾಖೆ ವ್ಯಾಪಕ ಪ್ರಚಾರ ನೀಡಬೇಕು ಎಂದು ಹೇಳಿದೆ.
ಈ ವೇಳೆ ಸರಕಾರದ ಪರ ವಕೀಲರು, 2023ರ ಅ.6ರಂದು ನಡೆದ ಸಭೆಯಲ್ಲಿ ಸಂತ್ರಸ್ತರಿಗೆ ನೀಡುವ ಪರಿಹಾರ ವಿಚಾರವಾಗಿ ಚರ್ಚಿಸಲಾಗಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಇದಕ್ಕೆ ನ್ಯಾಯ ಪೀಠ ಸಭೆಯ ನಂತರ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿತು.
ಕಳೆದ 8 ತಿಂಗಳಲ್ಲಿ ರಾಜ್ಯದಲ್ಲಿ 3,05,471 ಮಂದಿ ನಾಯಿ ಕಡಿತಕ್ಕೊಳಗಾಗಿದ್ದಾರೆ. ಈ ಅಂಕಿಸಂಶವನ್ನು ಗಮನಿಸಿದರೆ ಕಳೆದೆರಡು ವರ್ಷಗಳಿಗಿಂತ ಅತಿ ಹೆಚ್ಚಿನ ಪ್ರಕರಣವಾಗಿದೆ. 19ಕ್ಕೂ ಅಧಿಕ ಮಂದಿ ರೇಬಿಸ್‌ನಿಂದ ಮೃತಪಟ್ಟಿದ್ದಾರೆ.
ಜನವರಿ ತಿಂಗಳಲ್ಲಿ 40,287 ಮಂದಿಗೆ ನಾಯಿ ಕಚ್ಚಿದರೆ, ಮೇ ತಿಂಗಳಲ್ಲಿ 42,023 ಮಂದಿಗೆ ನಾಯಿ ಕಚ್ಚಿದೆ. ಉಳಿದೆಲ್ಲ ತಿಂಗಳಲ್ಲಿ 30 ಸಾವಿರಕ್ಕೆ ಮೇಲ್ಪಟ್ಟು ಕಡಿತವಾಗಿದೆ. ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 13,205 ಹಾಗೂ ಉಡುಪಿಯಲ್ಲಿ 11,407 ಪ್ರಕರಣಗಳು ದಾಖಲಾಗಿವೆ.