600 ಕೋಟಿ ನಷ್ಟ ಮಾಡಿ ಪೇಟಿಎಂನಿಂದ ಹೊರಬಂದ ವಾರೆನ್ ಬಫೆಟ್ !
Sunday, November 26, 2023
ಮುಂಬಯಿ: ವಿಶ್ವದ ಅತಿದೊಡ್ಡ ಹೂಡಿಕೆದಾರ ವಾರೆನ್ ಬಫೆಟ್ ಅವರ ಕಂಪನಿಯಾದ ಬರ್ಕ್‌ಶೈರ್ ಹಾಥ್‌ವೇ, ಈಗ ಪೇಟಿಎಂ ನಂಟನ್ನು ಕಳಚಿಕೊಂಡಿದೆ.
ಪೇಟಿಎಂನ ಮೂಲ ಕಂಪನಿಯಾದ 'ಒನ್ 97 ಕಮ್ಯೂನಿಕೇಷನ್ಸ್ ಲಿಮಿಟೆಡ್'ನಿಂದ ಬರ್ಕ್‌ಶೈರ್ ಹಾಥ್‌ವೇ ನಿರ್ಗಮಿಸಿದೆ. ತನ್ನ ಸಂಪೂರ್ಣ ಪಾಲನ್ನು ಮುಕ್ತ ಮಾರುಕಟ್ಟೆಯ ಮೂಲಕ ಬರ್ಕ್‌ಶೈರ್ ಹಾಥ್‌ವೇ 1,370 ಕೋಟಿ ರೂ.ಗೆ ಮಾರಾಟ ಮಾಡಿದೆ. ಇದರಿಂದ ಬಫೆಟ್ ಕಂಪನಿಗೆ 600 ಕೋಟಿ ರೂ.ನಷ್ಟವಾಗಿದೆ.
ವಾರೆನ್ ಬಫೆಟ್ ಅವರು ಐದು ವರ್ಷಗಳ ಹಿಂದೆ 2018ರಲ್ಲಿ ತಮ್ಮ ಕಂಪನಿಯ ಮೂಲಕ ಪೇಟಿಎಂನಲ್ಲಿ 2,200 ಕೋಟಿ ರೂ. ಹೂಡಿಕೆ ಮಾಡಿದ್ದರು. ಈ ಮೂಲಕ ಅವರು ಶೇಕಡಾ 2.46 ರಷ್ಟು ಪಾಲನ್ನು ಪಡೆದಿದ್ದರು. 2021ರಲ್ಲಿ ಪೇಟಿಎಂನ ಮೆಗಾ ಐಪಿಒ ಸಮಯದಲ್ಲಿ 220 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಲಾಗಿತ್ತು.
ಬರ್ಕ್ ಶೈರ್ ಹಾಥ್‌ವೇಯ ಷೇರುಗಳನ್ನು ಇಬ್ಬರು ವಿದೇಶಿ ಹೂಡಿಕೆದಾರರಾದ ಕಾಪ್ಲೋಲ್ ಮಾರಿಷಸ್ ಇನ್ವೆಸ್ಟ್‌ಮೆಂಟ್ ಮತ್ತು ಸಲ್ಲೋ ಮಾಸ್ಟರ್ ಫಂಡ್ ಖರೀದಿಸಿದೆ. ಬರ್ಕ್‌ಶೈರ್ ಗಿಂತ ಮೊದಲು, ಜಪಾನಿನ ಸಾಫ್ಟ್ ಬ್ಯಾಂಕ್ ಗ್ರೂಪ್ ಮತ್ತು ಚೀನಾದ ಅಲಿಬಾಬಾ ಗ್ರೂಪ್ ಕೂಡ 'ಒನ್ 97 ಕಮ್ಯುನಿಕೇಷನ್ಸ್'ನಲ್ಲಿ ತಮ್ಮ ಪಾಲನ್ನು ಮಾರಾಟ ಮಾಡಿದ್ದವು.
ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಒನ್ 97 ಕಮ್ಯೂನಿಕೇಷನ್ಸ್ ಲಿಮಿಟೆಡ್ ಆದಾಯವು ಶೇ.32ರಷ್ಟು ಏರಿಕೆಯಾಗಿ 2,519 ಕೋಟಿ ರೂ. ತಲುಪಿದೆ.