ಪತಿಯ ಸ್ನೇಹಿತನೇ ಮೊಬೈಲ್ ಕದ್ದು ಯುಪಿಐ ಮೂಲಕ 61 ಸಾವಿರ ಹಣ ವರ್ಗಾವಣೆ - ಮಹಿಳೆಯಿಂದ ದೂರು
Tuesday, November 28, 2023
ಬೆಳ್ತಂಗಡಿ: ಪತಿಯ ಗೆಳೆಯನೇ ಮಹಿಳೆಯೊಬ್ಬರ ಮೊಬೈಲ್ ಕಳವುಗೈದು ಯುಪಿಐ ಆ್ಯಪ್ ಮೂಲಕ ಬ್ಯಾಂಕ್ ಖಾತೆಯಿಂದ 61 ಸಾವಿರ ರೂ. ನಗದು ವರ್ಗಾವಣೆ ಮಾಡಿರುವ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುವೆಟ್ಟು ಗ್ರಾಮದ ನಿವಾಸಿ ಅಭಿದಾ ಬಾನು ದೂರು ನೀಡಿರುವ ಮಹಿಳೆ. ತಮ್ಮ ಪತಿಯ ಸ್ನೇಹಿತ ಸಿದ್ದೀಕ್ ಮೊಬೈಲ್ ಕದ್ದು ನಗದು ವರ್ಗಾವಣೆ ಮಾಡಿದ್ದಾನೆ ಆರೋಪಿಸಿ ದೂರು ನೀಡಿದ್ದಾರೆ.
ಆರೋಪಿ ಮನೆಗೆ ಬಂದು ತಮಗೆ ಗೊತ್ತಿಲ್ಲದಂತೆ ಮೊಬೈಲ್ ತೆಗೆದು, ತಮ್ಮ ಬ್ಯಾಂಕ್ ಖಾತೆಯಲ್ಲಿದ್ದ 64 ಸಾವಿರ ರೂ. ಹಣದಲ್ಲಿ 61 ಸಾವಿರ ರೂ. ಹಣವನ್ನು ಬೇರೆ ಖಾತೆಗೆ ವರ್ಗಾವಣೆ ಮಾಡಿದ್ದಾನೆ. ಆರೋಪಿ ಸಿದ್ದೀಕ್, ತಮ್ಮ ಪತಿಯ ಸ್ನೇಹಿತನಾಗಿದ್ದು ಕುಟುಂಬದೊಂದಿಗೆ ಆತ್ಮೀಯನಾಗಿದ್ದ. ಆದ್ದರಿಂದ ತಮ್ಮ ಫೋನ್ ಪೇ ಪಾಸ್‌ವರ್ಡ್ ತಿಳಿದುಕೊಂಡಿದ್ದ ಎಂದಿದ್ದಾರೆ. ಹಣ ಆ ಬಳಿಕ ಮೊಬೈಲ್ ಹಿಂದಿರುಗಿಸಬಹುದು ಎಂದು ಮಹಿಳೆ ಸುಮ್ಮನಿದ್ದರು. ಆದರೆ ಹಲವು ಸಮಯ ಕಳೆದರೂ ಹಣ ಹಿಂದಿರುಗಿಸದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.