ಮಂಗಳೂರು: ಸೈಬರ್ ವಂಚಕರಿಗೆ ಬಲಿಯಾದ ನಿವೃತ್ತ ಪ್ರಾಂಶುಪಾಲೆ ಕಳೆದುಕೊಂಡದ್ದು ಬರೋಬ್ಬರಿ 72ಲಕ್ಷ...!
Tuesday, November 7, 2023
ಮಂಗಳೂರು: ಸೈಬರ್ ವಂಚಕರ ಮರುಳು ಮಾತಿಗೆ ಬಲಿಬಿದ್ದ ಮಂಗಳೂರಿನ ನಿವೃತ್ತ ಪ್ರಾಂಶುಪಾಲೆಯೊಬ್ಬರು ಬರೋಬ್ಬರಿ 72 ಲಕ್ಷ ರೂ. ಕಳೆದುಕೊಂಡು ಈಗ ತಲೆಮೇಲೆ ಕೈಹೊತ್ತು ಕುಳಿತಿದ್ದಾರೆ.
ವರ್ಷದ ಹಿಂದಷ್ಟೇ ಪ್ರಾಂಶುಪಾಲೆ ನಿವೃತ್ತರಾಗಿದ್ದರು. ಕಳೆದ ತಿಂಗಳಿಂದ ಇವರಿಗೆ ಇಬ್ಬರು ಅಪರಿಚಿತರು ವಾಟ್ಸ್ಆ್ಯಪ್ ನಲ್ಲಿ ಪರಿಚಯವಾಗಿದ್ದಾರೆ. ಅವರಿಬ್ಬರೂ ತಮ್ಮನ್ನು ಸತ್ಯಂ ಪಾಂಡೆ ಹಾಗೂ ಮಿತ್ತಲ್ ಎಂದು ಪರಿಚಯಿಸಿ ತಾವು ಲಾಟರಿ ಕಂಪೆನಿಯ ಪ್ರತಿನಿಧಿಗಳೆಂದು ಹೇಳಿಕೊಂಡಿದ್ದಾರೆ. ಅಲ್ಲದೆ ನಿಮಗೊಂದು ದೊಡ್ಡ ಮೊತ್ತದ ಲಾಟರಿ ಬರಲಿಕ್ಕಿದೆ ಎಂದು ಮಹಿಳೆಯನ್ನು ನಂಬಿಸಿದ್ದಾರೆ.
ಕೆಲವೇ ದಿನಗಳಲ್ಲಿ ಲಾಟರಿ ಮೊತ್ತವು ತಮ್ಮ ಖಾತೆಗೆ ಬರಲಿದೆ. ಆದರೆ ಹಣ ಬರುವಾಗ ನಿಮಗೆ ಗೊತ್ತಾಗಲ್ಲ. ಬ್ಯಾಂಕ್ ಖಾತೆಯಿಂದ ಮೆಸೇಜ್ ಬಂದರೂ ತಿಳಿಯಲ್ಲ. ಆದ್ದರಿಂದ ನಿಮ್ಮ ಬ್ಯಾಂಕ್ ಖಾತೆಗೆ ನಮ್ಮದೇ ಮೊಬೈಲ್ ನಂಬರನ್ನು ಸೇರಿಸಿದಲ್ಲಿ ಎಲ್ಲವನ್ನೂ ನೋಡಿಕೊಳ್ಳುತ್ತೇವೆ ಎಂದು ನಂಬಿಸಿದ್ದರು. ಆಗಂತುಕರನ್ನು ಪೂರ್ತಿಯಾಗಿ ನಂಬಿದ್ದ ಮಹಿಳೆ, ಅವರು ಹೇಳಿದಂತೆ ತಮ್ಮ ಎಸ್ ಬಿಐ ಮತ್ತು ಇಂಡಿಯನ್ ಬ್ಯಾಂಕ್ ಖಾತೆಗಳಿಗೆ ಅವರಲ್ಲೊಬ್ಬನ ಮೊಬೈಲ್ ನಂಬರನ್ನು ಜೋಡಿಸಿದ್ದರು.
ಅಕ್ಟೋಬರ್ 26ರಂದು ಎಸ್ ಬಿಐ ಖಾತೆಗೆ ಪಿಂಚಣಿ ಮೊತ್ತ 72 ಲಕ್ಷ ರೂ. ಹಣ ಪಾವತಿಯಾಗಿತ್ತು. ಮೊಬೈಲ್ ಸಂಖ್ಯೆ ಬದಲಾದ್ದರಿಂದ ಹಣ ಪಾವತಿಯಾಗಿದ್ದು ಆಕೆಗೆ ತಿಳಿದಿರಲಿಲ್ಲ. ಪಿಂಚಣಿ ಮೊತ್ತ ಬ್ಯಾಂಕಿಗೆ ಪಾವತಿಯಾಗಿದೆಯೇ ಎಂದು ತಿಳಿದುಕೊಳ್ಳಲು ಅವರು ಬ್ಯಾಂಕಿಗೆ ತೆರಳಿದ್ದರು. ಅದರಂತೆ, ಬ್ಯಾಂಕಿಗೆ ಹೋಗಿ ನೋಡಿದಾಗ, ಪೂರ್ತಿ ಹಣವನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆಯಾಗಿರುವುದು ತಿಳಿದುಬಂದಿದೆ. ಆದ್ದರಿಂದ ನ.5ರಂದು ಮಂಗಳೂರಿನ ಸೈಬರ್ ಠಾಣೆಗೆ ಬಂದು ದೂರು ಹೇಳಿಕೊಂಡಿದ್ದಾರೆ.