ಪುತ್ರನಿಗೆ ಸಂಬಂಧಿಸಿದ ಕಂಪೆನಿಗೆ ಅಕ್ರಮವಾಗಿ 850 ಕೋಟಿ ರೂ. ಲಾಭ ಮಾಡಿಕೊಟ್ಟ ಸರಕಾರದ ಮುಖ್ಯ ಕಾರ್ಯದರ್ಶಿ
Wednesday, November 15, 2023
ನವದೆಹಲಿ: ಪುತ್ರನಿಗೆ ಸಂಬಂಧಪಟ್ಟ ಕಂಪನಿಯೊಂದಕ್ಕೆ ಅಕ್ರಮವಾಗಿ 850 ಕೋಟಿ ರೂ. ಲಾಭ ಮಾಡಿಕೊಟ್ಟ ಆರೋಪವೊಂದು ದೆಹಲಿ ಸರಕಾರದ ಮುಖ್ಯ ಕಾರ್ಯದರ್ಶಿಯ ಮೇಲೆಯೇ ಕೇಳಿ ಬಂದಿದೆ. ಈ ಸಂಬಂಧ ಸಿಎಂ ಅವರಿಗೆ 670 ಪುಟಗಳ ಪ್ರಾಥಮಿಕ ವರದಿ ಕೂಡ ಸಲ್ಲಿಕೆಯಾಗಿದೆ.
ಪ್ರಕರಣದಲ್ಲಿ ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ಆರೋಪಿ.
ದ್ವಾರಕಾ ಎಕ್ಸ್ಪ್ರೆಸ್ವೇ ಯೋಜನೆಯಲ್ಲಿ ನರೇಶ್ ಕುಮಾರ್ ತಮ್ಮ ಪುತ್ರನಿಗೆ ಸಂಬಂಧಪಟ್ಟ ಕಂಪೆನಿಗೆ ಅಕ್ರಮವಾಗಿ 850 ಕೋಟಿ ರೂ. ಲಾಭ ಮಾಡಿಕೊಟ್ಟಿದ್ದಾರೆ. ಈ ಬಗ್ಗೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರಿಗೆ ಸಲ್ಲಿಸಲಾದ 670 ಪುಟಗಳ ಪ್ರಾಥಮಿಕ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ದೆಹಲಿ ವಿಜಿಲೆನ್ಸ್ ಮಿನಿಸ್ಟರ್ ಅತಿಷಿ ಈ ಕುರಿತ ತನಿಖೆಗೆ ಆದೇಶಿಸಿದ್ದರು.
ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ವಿರುದ್ಧ ಮಾಡಲಾಗಿರುವ ಎಲ್ಲ ಆರೋಪಗಳು ಸುಳ್ಳು ಹಾಗೂ ಆಧಾರರಹಿತ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಶ್ವಿನಿ ಕುಮಾರ್ ಸುದ್ದಿಗೋಷ್ಠಿ ನಡೆಸಿ ಸಮಜಾಯಿಷಿ ನೀಡಿದ್ದರು. ಇದರ ಬೆನ್ನಿಗೇ ಈ ಪ್ರಕರಣಕ್ಕೆ ಸಂಬಂಧಿತ ಪ್ರಾಥಮಿಕ ವರದಿ ಹೊರಬಿದ್ದಿದೆ. ಅದಾಗ್ಯೂ ಈ ವಿಚಾರವಾಗಿ ಮುಖ್ಯ ಕಾರ್ಯದರ್ಶಿ ನರೇಶ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ದ್ವಾರಕಾ ಎಕ್ಸ್ಪ್ರೆಸ್ವೇ ಸಂಬಂಧಿಸಿದ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ನರೇಶ್ ಕುಮಾರ್, ಡಿಸಿ ಹೇಮಂತ್ ಕುಮಾರ್ ಹಾಗೂ ಭೂಮಾಲಕರ ಮಧ್ಯೆ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ನರೇಶ್ ಕುಮಾರ್ ಪುತ್ರ ಕರಣ್ ಚೌಹಾನ್ಗೆ ಸಂಬಂಧಿತ ಕಂಪೆನಿಗೆ ಅವರು ಕೋಟಿಗಟ್ಟಲೆ ರೂ. ಮೌಲ್ಯದ ಅನುಕೂಲವನ್ನು ಅಕ್ರಮವಾಗಿ ಮಾಡಿರುವುದನ್ನೂ ಉಲ್ಲೇಖಿಸಲಾಗಿದೆ. ಈ ವ್ಯವಹಾರದಲ್ಲಿ 850 ಕೋಟಿ ರೂ. ಮೊತ್ತದ ಅಕ್ರಮವಾಗಿದೆ. ಆದರೂ ಬರೀ 312 ಕೋಟಿ ರೂ. ಮೊತ್ತದ್ದ ಹಗರಣ ಎಂದು ತೋರಿಸಲು ವಿಜಿಲೆನ್ಸ್ನ ಕೆಲವು ಅಧಿಕಾರಿಗಳೊಂದಿಗೆ ನರೇಶ್ ಕುಮಾರ್ ಪ್ರಯತ್ನ ನಡೆಸಿದ್ದಾರೆಂದೂ ಹೇಳಲಾಗುತ್ತಿದೆ.