ಅಡಿಕೆ ವ್ಯಾಪಾರಿಯ ಕಾರಿನಲ್ಲಿದ್ದ ಒಂದು ಕೋಟಿ ನಗದು ಕಳವು - ಕಾರು ಚಾಲಕ ಸಹಿತ ನಾಲ್ವರು ಅರೆಸ್ಟ್
Friday, November 3, 2023
ಬೆಂಗಳೂರು: ಗಮನವನ್ನು ಬೇರೆಡೆ ಸೆಳೆದು ಅಡಿಕೆ ವ್ಯಾಪಾರಿಯ ಕಾರಿನಲ್ಲಿದ್ದ 1ಕೋಟಿ ರೂ. ನಗದು ಕಳವುಗೈದ ಕಾರು ಚಾಲಕನ ಸಹಿತ ನಾಲ್ವರು ಆರೋಪಿಗಳನ್ನು ಬೆಂಗಳೂರಿನ ಉಪ್ಪಾರಪೇಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಸ್ವಾಮಿ(34), ಅನುಪಮಾ(38), ಪವನ್(30) ಹಾಗೂ ಕಾರ್ತಿಕ್(27) ಬಂಧಿತರು.
ಕೃತ್ಯ ಎಸಗಿದ ಆರೋಪಿಗಳಿಂದ 90.19 ಲಕ್ಷ ರೂ ನಗದು, ಕದ್ದ ಹಣದಲ್ಲಿ ಖರೀದಿಸಿದ್ದ 6.49 ಲಕ್ಷ ಮೌಲ್ಯದ 2 ಆ್ಯಪಲ್ ಐಫೋನ್‌ಗಳು, 1 ಇಯರ್ ಫೋನ್, 2 ವಾಚುಗಳು, 1 ಸ್ಮಾರ್ಟ್ ವಾಚ್, 61.670 ಗ್ರಾಂ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ 2 ಕಾರುಗಳು, 1 ಬೈಕ್, 4 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡಿಸಿಕೊಳ್ಳಲಾಗಿದೆ.
ಅ.7ರಂದು ಬೆಂಗಳೂರಿಗೆ ಬಂದಿದ್ದ ಅಡಿಕೆ ವ್ಯಾಪಾರಿ ಉಮೇಶ್ ಅವರ ಕಾರಿನಲ್ಲಿದ್ದ 1 ಕೋಟಿ ರೂ. ಕಳ್ಳತನವಾಗಿತ್ತು. ಈ ಸಂಬಂಧ ಕಾರು ಚಾಲಕ ಸ್ವಾಮಿಯ ಮೇಲೆ ಅನುಮಾನ ವ್ಯಕ್ತಪಡಿಸಿ ಅ.21ರಂದು ಉಪ್ಪಾರಪೇಟೆ ಠಾಣೆಗೆ ಉಮೇಶ್ ದೂರು ನೀಡಿದ್ದರು.
ಚಿತ್ರದುರ್ಗ ಜಿಲ್ಲೆಯ ಭೀಮಸಮುದ್ರ ಮೂಲದ ಉಮೇಶ್ ವಿವಿಧ ಜಿಲ್ಲೆಗಳ ರೈತರಿಂದ ಅಡಿಕೆ ಖರೀದಿಸಿ, ಹೊರ ರಾಜ್ಯಗಳಿಗೆ ರಫ್ತು ಮಾಡುದ್ದರು. ಅ.7ರಂದು ಅಡಿಕೆ ಖರೀದಿಸಲು ಹಣದೊಂದಿಗೆ ಉಮೇಶ್, ತಮ್ಮಕಾರು ಚಾಲಕ ಸ್ವಾಮಿಯೊಂದಿಗೆ ಚಿತ್ರದುರ್ಗದಿಂದ ಹೊರಟಿದ್ದರು. ಕಾರಿನ ಢಿಕ್ಕಿಯಲ್ಲಿ ಹಣದ ಬ್ಯಾಗ್ ಇರಿಸಿದ್ದರು. ತುಮಕೂರಿನಲ್ಲಿ ಅಡಿಕೆ ಸಿಕ್ಕಿರಲಿಲ್ಲ. ಆದ್ದರಿಂದ ಬೆಂಗಳೂರಿನ ಚಂದ್ರಾಲೇಔಟ್‌ನ ಪಿಜಿಯಲ್ಲಿದ್ದ ಪುತ್ರಿಯನ್ನು ಮಾತನಾಡಿಸಿಕೊಂಡು ಹೋಗೋಣವೆಂದು ಬೆಂಗಳೂರಿಗೆ ಬಂದಿದ್ದರು.
ಗಾಂಧಿನಗರದ ಕಾಳಿದಾಸ ರಸ್ತೆಯಲ್ಲಿರುವ ಗಿರಿಯಾಸ್ ಬಳಿ ಕಾರು ನಿಲ್ಲಿಸಿದ್ದ ಉಮೇಶ್ ಹಾಗೂ ಸ್ವಾಮಿ, ಸಮೀಪದಲ್ಲಿದ್ದ ಹೋಟೆಲ್‌ನಲ್ಲಿ ಊಟ ಮಾಡಿಕೊಂಡು ಬಂದಿದ್ದರು. ಬಳಿಕ ಚಂದ್ರಾಲೇಔಟ್‌ಗೆ ತೆರಳಿ ಮಗಳನ್ನು ಮಾತನಾಡಿಸಿಕೊಂಡು ಚಿತ್ರದುರ್ಗಕ್ಕೆ ಹೊರಟಿದ್ದರು. ಚಹಾ ಕುಡಿಯಲೆಂದು ಚಾಲಕ ಸ್ವಾಮಿ, ಡಾಬಸ್‌ಪೇಟೆ ಬಳಿ ಕೆಲ ನಿಮಿಷ ಕಾರು ನಿಲ್ಲಿಸಿದ್ದ ಬಳಿಕ ಇಬ್ಬರೂ ಕಾರಿನಲ್ಲಿ ಭೀಮಸಮುದ್ರಕ್ಕೆ ಹೋಗಿ ನೋಡಿದಾಗ ಹಣದ ಬ್ಯಾಗ್ ನಾಪತ್ತೆಯಾಗಿತ್ತು. ಸಾಕಷ್ಟು ಹುಡುಕಾಟದ ಬಳಿಕ ಬ್ಯಾಗ್ ಸಿಗದಿದ್ದಾಗ ಉಪ್ಪಾರಪೇಟೆ ಠಾಣೆಯಲ್ಲಿ ಉಮೇಶ್ ವಿರುದ್ಧ ದೂರು ನೀಡಿದ್ದರು.
ಈ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಉಪ್ಪಾರಪೇಟೆ ಪೊಲೀಸರು ಕಾರಿನ ಚಾಲಕ ಸ್ವಾಮಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆಗ ಆರೋಪಿಗಳು ಸೇರಿ ಸಂಚು ರೂಪಿಸಿ ನಗರದ ಹೊರವಲಯದಲ್ಲಿ ಹಣ ಕಳ್ಳತನ ಮಾಡಿರುವುದು ತಿಳಿದುಬಂದಿದೆ. ಸದ್ಯ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.