ಗಗನಸಖಿಯೊಂದಿಗೆ ಅಸಭ್ಯ ವರ್ತನೆ - ವಿಮಾನ ಪ್ರಯಾಣಿಕ ಅರೆಸ್ಟ್
Monday, November 20, 2023
ಬೆಂಗಳೂರು: ಜೈಪುರದಿಂದ ಬೆಂಗಳೂರಿಗೆ ಆಗಮಿದುತ್ತಿದ್ದ ಇಂಡಿಗೊ ವಿಮಾನದ ಗಗನಸಖಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದಲ್ಲಿ ರಾಜಸ್ಥಾನದ ಸಿರ್ಕಾ ಜಿಲ್ಲೆಯ ರವೀಂದರ್ ಸಿಂಗ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಪಾನಮತ್ತನಾಗಿದ್ದ ಪ್ರಯಾಣಿಕ ರವೀಂದರ್ ಸಿಂಗ್ ಗಗನಸಖಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಈ ಬಗ್ಗೆ ಎಚ್ಚರಿಕೆ ನೀಡಿದ ಬಳಿಕವೂ ಆತ ಪದೇಪದೇ ಗಗನಸಖಿಯ ಕೈ ಹಿಡಿದು ಕಿರುಕುಳ ನೀಡಿದ್ದಾನೆ ಎಂದು ಇಂಡಿಗೊ ಅಧಿಕಾರಿ ವರುಣ್ ಕುಮಾರ್ ಹೇಳಿದ್ದಾರೆ.
ಈತನ ಅಸಭ್ಯ ವರ್ತನೆಯನ್ನು ಗಮನಿಸಿದ ಸಹ ಪ್ರಯಾಣಿಕ, ಇತರ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ವಿಮಾನದ ಕ್ಯಾಪ್ಟನ್, ಈತನನ್ನು ಅಶಿಸ್ತಿನ ಪ್ರಯಾಣಿಕ ಎಂದು ಘೋಷಿಸಿದ್ದಾರೆ. ವಿಮಾನ ಬೆಂಗಳೂರು ನಿಲ್ದಾಣಕ್ಕೆ ಆಗಮಿಸಿದ ಬಳಿಕ ವಿಮಾನ ಸಿಬ್ಬಂದಿ ಈ ಬಗ್ಗೆ ದೂರು ದಾಖಲಿಸಿದ್ದಾರೆ.ಇಂಡಿಗೊ ಅಧಿಕಾರಿ ವರುಣ್ ಕುಮಾರ್ ಈ ಘಟನೆಯನ್ನು ಶನಿವಾರ ವಿಮಾನ ನಿಲ್ದಾಣ ಅಧಿಕಾರಿಗಳಿಗೆ ಅಧಿಕೃತವಾಗಿ ವರದಿ ಮಾಡಿದ್ದು, ಆರೋಪಿ ಸಿಂಗ್ ನನ್ನು ಭಾನುವಾರ ಬಂಧಿಸಲಾಗಿತ್ತು. ಬಳಿಕ ಜಾಮೀನಿನ ಮೇರೆಗೆ ಬಿಡುಗಡೆ ಮಾಡಲಾಗಿದೆ.